ಪುತ್ತೂರು, ಜ.22 (DaijiworldNews/HR): ಜನವರಿ 3ರಂದು ವಿವಾಹ ದಿಬ್ಬಣ ಹೊರಟಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಏಳು ಮಂದಿ ಮೃತ ಪಟ್ಟು, 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಘಟನೆ ಕೇರಳ - ಕರ್ನಾಟಕ ಗಡಿಯ ಪಾಣತ್ತೂರುನಲ್ಲಿ ನಡೆದಿದ್ದು, ಇದೀಗ ಈ ಪ್ರಕರಣ ನಡೆದು ತಿಂಗಳಾಗುತ್ತಾ ಬಂದರೂ ಪರಿಹಾರ ಸಿಗದೆ ನೊಂದ ಕುಟುಂಬಗಳು ಅಂಗಲಾಚುತ್ತಿದೆ.


ಸಾವಿಗೀಡಾದ ಆರು ಕುಟುಂಬಗಳ ಪೈಕಿ ಎಲ್ಲರು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡು ಗ್ರಾಮಕ್ಕೆ ಸೇರಿದವರು, ಬಸ್ ನಲ್ಲಿದ್ದ ರಾಜೇಶ್ ನಾಯ್ಕ ಎಂಬವರ ನಾಲ್ವರಿದ್ದ ಕುಟುಂಬ ಇದೀಗ ಎರಡಕ್ಕೆ ಇಳಿದಿದೆ. ಮನೆ ಯಜಮಾನ ರಾಜೇಶ್ ನಾಯ್ಕ ಹಾಗೂ ಅವರ 12 ವರ್ಷದ ಮಗ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಮನೆಯ ಯಜಮಾನನಿಲ್ಲದ ಕುಟುಂಬ ಇದೀಗ ಒಪ್ಪತ್ತಿನ ಊಟಕ್ಕೂ ಗ್ರಾಮದ ಜನರನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಹಿಂದೆ ಜೀವನ ನಿರ್ವಹಣೆಗಾಗಿ ಮಾಡಿದ ಸಾಲ ಕೂಡ ಈ ಕುಟುಂಬದ ಮೇಲಿದ್ದು, ಸಾಲ ತೀರಿಸುವ ಕೈಯೇ ಅವಘಡದಿಂದ ಕಣ್ಮರೆಯಾಗಿದೆ.
ಇನ್ನು ಸಂತ್ರಸ್ತ ಎಲ್ಲಾ ಕುಟುಂಬಗಳು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದು, ದಿನಗೂಲಿಯಿಂದಲೇ ಜೀವನ ನಿರ್ವಹಿಸುವ ಈ ಕುಟುಂಬಗಳ ಆಧಾರ ಸ್ತಂಭಗಳೇ ಬಸ್ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿದ್ದು, ದಾನಿಗಳ ಸಹಾಯದಲ್ಲೇ ಈ ಕುಟುಂಬಗಳೀಗ ಬದುಕುತ್ತಿವೆ. ಕೇರಳ ಸರಕಾರ ಹಾಗೂ ಕರ್ನಾಟಕ ಸರಕಾರ ಈ ಸಂತ್ರಸ್ತರಿಗೆ ಪರಿಹಾರ ನೀಡುವ ಭರವಸೆಯನ್ನು ನೀಡಿದೆಯಾದರೂ, ಈ ವರೆಗೂ ಈ ಕುಟುಂಬಗಳಿಗೆ ನೀಡಿದ ಭರವಸೆ ಈಡೇರಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕುಟುಂಬದ ಆಧಾರಸ್ತಂಭಗಳೇ ಬೀದಿ ಪಾಲಾಗುವ ಸ್ಥಿತಿಗೆ ತಲುಪುವ ಮೊದಲು ರಾಜ್ಯ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಮುಖ್ಯಮಂತ್ರಿ ಈ ಕುಟುಂಬಗಳ ನರೆವಿಗೆ ಧಾವಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.