ಮೂಡುಬಿದಿರೆ, ಜ.22 (DaijiworldNews/HR): ಪುರಸಭೆ ವ್ಯಾಪ್ತಿಯ ಮಾರೂರು ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಯಿತು.

ಮಾರೂರು ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ಗ್ರಾಮಸ್ಥರ ವಿರೋಧ ಇದೆ. ಆದರೆ ಜನರ ಹಿತ ಕಾಪಾಡಿಕೊಳ್ಳುವ ಬದಲು ಆಡಳಿತ ಪಕ್ಷದ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಮದ್ಯದಂಗಡಿ ತೆರೆಯುವುಕ್ಕೆ ಪ್ರಯತ್ನಗಳಾಗುತ್ತಿವೆ. ನ್ಯಾಯಯುತವಾಗಿ ಹೋರಾಟ ನಡೆಸಿದರೂ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು ಅಹವಾಲು ಸ್ವೀಕರಿಸಲು ಬರುವುದಿಲ್ಲ. ತಹಸೀಲ್ದಾರ್ ಕಚೇರಿಯ ಭ್ರಷ್ಟಾಚಾರ, ಜನವಿರೋಧಿ ನಡೆಯ ವಿರುದ್ಧ ಮುಂದೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಸದಸ್ಯ ಜೊಸ್ಸಿ ಮೆನೇಜಸ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, "ಮಾರೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಮದ್ಯಮುಕ್ತ ಗ್ರಾಮವಾಗಿ ಮಾಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳ ಕುಮ್ಮಕ್ಕಿನೊಂದಿಗೆ ಸರ್ಕಾರಿ ಸ್ವಾಮ್ಯದ ಮದ್ಯದ ಮಳಿಗೆಯನ್ನು ತೆರೆಯಲು ಕೆಲವು ತಿಂಗಳುಗಳಿಂದ ಮಾರೂರು ಪರಿಸರದಲ್ಲಿ ಜಾಗದ ಅನ್ವೇಷಣೆಯನ್ನು ಮಾಡಿರುವುದು ಅಲ್ಲದೆ ಮಳಿಗೆಗೆ ಕಟ್ಟಡವನ್ನು ಗುರುತಿಸಿರುವುದು ಗಮನಕ್ಕೆ ಬಂದಿದೆ" ಎಂದರು.
ಒಂದುವರೆ ಗಂಟೆಗಳ ಕಾಲ ಪ್ರತಿಭಟನೆ ನಡೆದರೂ, ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು ಮನವಿ ಸ್ವೀಕರಿಸಲು ಬಾರದಿದ್ದಾಗ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಈ ಸಂದರ್ಭ ಅಭಯಚಂದ್ರ ಜೈನ್ ಸಹಿತ ಕಾಂಗ್ರೆಸ್ ಮುಖಂಡರು ತಹಸೀಲ್ದಾರ್ ಕಚೇರಿಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರಬಾರ ತಹಸೀಲ್ದಾರ್ ವೆಂಕಟೇಶ್ ನಾಯ್ಕ್ ಅವರು ಮನವಿ ಸ್ವೀಕರಿಸಲು ಬಂದಾಗ ತರಾಟೆ ತೆಗೆದುಕೊಳ್ಳಲು ಕಾಂಗ್ರಸ್ ಮುಖಂಡರು ಮುಂದಾದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ಇಕ್ಬಾಲ್ ಕರೀಂ, ಪುರಂದರ ದೇವಾಡಿಗ, ಹಿದಾಯತ್ತುಲ್, ಗ್ರಾಪಂ ಸದಸ್ಯರಾದ ಅರುಣ್ ಶೆಟ್ಟಿ, ಪುರುಷೋತ್ತಮ್ ನಾಯ್ಕ್, ಮುಖಂಡರಾದ ವಾಸುದೇವ ನಾಯಕ್ ಜಯ ಕುಮಾರ್ ಶೆಟ್ಟಿ, ಶಿವಾನಂದ ಪಾಂಡ್ರು, ನಿತಿನ್ ಬೆಳುವಾಯಿ, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.