ಮಂಗಳೂರು, ಜ.23 (DaijiworldNews/MB) : ನೊಂದ ಭಕ್ತ ಜನರ ಕೈ ಬಿಡದ ದೈವಗಳು ಇದೀಗ ಕಳ್ಳನನ್ನೂ ಹಿಡಿಯಲು ಸಹಾಯ ಮಾಡಿದ್ದಾರೆ. ಹೌದು ಕೊರಗಜ್ಜ ಮತ್ತು ಕಲ್ಗುಡ ಶಕ್ತಿಗಳು ಜನರ ಕೈ ಹಿಡಿದು ಕಣ್ಣೀರು ಒರೆಸಿ ಭಕ್ತಿ ಮತ್ತು ಇರುವಿಕೆಯನ್ನು ಹೆಚ್ಚಾಗುವಂತೆ ಮಾಡಿದ್ದಾರೆ. ಇಂತಹದೊಂದು ಪವಾಡಕ್ಕೆ ಸಾಕ್ಷಿಯಾಗಿದ್ದು ಉಡುಪಿ ದೊಡ್ಡಣ್ಣಗುಡ್ಡೆಯಲ್ಲಿರುವ ಮೂಡುಸಗ್ರಿ ಸನ್ನಿಧಾನ.




ಹಸಿ ಮೀನನ್ನು ಬಿಸಿಲಿನಲ್ಲಿ ಒಣಗಿಸಿ ಒಣ ಮೀನು ಮಾಡೋದು ಕಷ್ಟದ ಕಾಯಕ, ಮಲ್ಪೆ ಬಂದರಿನ ಬಳಿ ಹಸಿ ಮೀನು ಒಣಗಿಸಿ ಮಾರಾಟ ಮಾಡಿ ಜೀವನ ಸಾಗಿಸುವ ಹಲವಾರು ಮಹಿಳೆಯರಿದ್ದಾರೆ. ಇತ್ತೀಚೆಗೆ ಗೋಣಿಯಲ್ಲಿ ಕಟ್ಟಿಟ್ಟ ಒಣಮೀನುಗಳು ಕಾಣೆ ಆಗ್ತಾ ಇತ್ತು. ಟನ್ ಗಟ್ಟಲೆ ಒಣ ಮೀನು ಕಳ್ಳತನ ಆಗ್ತಾ ಇತ್ತು. ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೂ ಕಳ್ಳ ಪತ್ತೆ ಆಗಿರಲಿಲ್ಲ. ದಿಕ್ಕ ತೋಚದ ಮೀನುಗಾರ ಮಹಿಳೆಯರು ದೈವದ ಮೊರೆ ಹೋಗಿದ್ದರು.
ಒಣ ಮೀನು ಕಳವಾಗುತ್ತಿದ್ದ ಹಿನ್ನಲೆ ಭಾಸ್ಕರ ಗುರೂಜಿ ಬಳಿ ಮೀನುಗಾರರ ಮಹಿಳೆಯರು ದೂರು ನೀಡಿದ್ದರು. ತೆಂಗಿನ ಕಾಯಿ ಮತ್ತು ದೈವದ ಗಂಧ ಕೊಟ್ಟಿದ್ದರು. ಕಳ್ಳತನ ಆಗುವ ಸ್ಥಳದಲ್ಲಿ ಇಡುವಂತೆ ಸೂಚನೆ ನೀಡಿದ್ದರು. ಇನ್ನು ಕೊರಗಜ್ಜನ ದರ್ಶನ ಸೇವೆಯಲ್ಲಿ 3 ದಿನದೊಳಗೆ ಕಳ್ಳನನ್ನು ನಿಮ್ಮ ಮುಂದೆ ತಂದು ನಿಲ್ಲಿಸುತ್ತೇನೆ ಎನ್ನುವ ಅಭಯವನ್ನೂ ಕೊರಗಜ್ಜ ನೀಡಿದ್ದ.
ಕೊರಗಜ್ಜ ಅಭಯ ನೀಡಿದ ಎರಡನೇ ದಿನಕ್ಕೆ, ಮಹಿಳೆಯರು ಮೀನು ಒಣಗಿಸುವ ಸ್ಥಳಕ್ಕೆ ಒಬ್ಬ ಯುವಕ ರಿಕ್ಷಾದಲ್ಲಿ ಬಂದು ನನ್ನಲ್ಲಿ ಒಣ ಮೀನು ಇದೆ ನೀವು ಮಾರಾಟ ಮಾಡಿ ನನಗೆ ಹಣ ನೀಡಿ ಎಂದಿದ್ದಾನೆ.
ಆಟೋದಲ್ಲಿದ್ದ ಗೋಣಿ ನೋಡುವಾಗಲೇ ಮಹಿಳೆಯರಿಗೆ ಇದು ನಮ್ಮದೇ ಮೀನು ಎನ್ನುವ ಅನುಮಾನ ಬಂದಿತ್ತು. ಹೀಗಾಗಿ ಕದ್ದ ಮೀನುನನ್ನು ಮತ್ತೆ ಅವರಲ್ಲಿಗೇ ಮಾರಲು ಬಂದ ತಮಿಳುನಾಡು ಮೂಲದ ರಮಾನಾಥನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಮೀನುಗಾರ ಮಹಿಳೆಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಲ್ಡುಡನ ಮಹಿಮೆ ಮತ್ತು ಕೊರಗಜ್ಜ ಕೊಟ್ಟ ಅಭಯ ನುಡಿ ನಿಜವಾಗಿದೆ. 3 ದಿನದೊಳಗೆ ಕಳ್ಳನನ್ನು ನಿಮ್ಮ ಬಳಿಗೆ ಕಳಿಸಿ ಕೊಡುತ್ತೇನೆ ಎನ್ನುವ ಅಭಯದ ನುಡಿ ನೀಡಿದ್ದ ಕೊರಗಜ್ಜ ತನ್ನ ಮಹಿಮೆಯನ್ನೂ ಸಾಬೀತುಪಡಿಸಿದ್ದಾರೆ. ಕಷ್ಟ ಪಟ್ಟು ದುಡಿದ ಟನ್ ಗಟ್ಟಲೆ ಒಣ ಮೀನು ಕಳೆದುಕೊಂಡು ದುಖದಲ್ಲಿದ್ದ ಮೀನುಗಾರ ಮಹಿಳೆಯರು ಇದೀಗ ಸಂತೋಷಗೊಂಡಿದ್ದಾರೆ ಮತ್ತು ಕಲ್ಗುಡ ಮತ್ತು ಕೊರಗಜ್ಜನ ಮಹಿಮೆಯನ್ನು ಕೊಂಡಾಡುತ್ತಿದ್ಧಾರೆ.