ಮಂಗಳೂರು, ಜ.23 (DaijiworldNews/MB) : ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಸೇತುವೆಯ ಸಮೀಪ ವಾಹನ ಸವಾರರು ತ್ಯಾಜ್ಯ ಎಸೆಯುವ ಜಾಗದಲ್ಲಿ ಹಸಿರು ದಳ ಸಂಸ್ಥೆ ಹಾಗೂ ಎಪಿಡಿ ಫೌಂಡೇಶನ್ ಸದಸ್ಯರು ಜಾಗೃತಿ ಮೂಡಿಸುವ ಕಾರ್ಯವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಶ್ಲಾಘಿಸಿದ್ದಾರೆ.




ಸ್ಥಳಕ್ಕೆ ತೆರಳಿದ ಶಾಸಕ ಕಾಮತ್ ಅವರು, ''ನೇತ್ರಾವತಿ ಸೇತುವೆಯ ಬಳಿ ಖಾಲಿ ಜಾಗದಲ್ಲಿ ಪ್ರತಿನಿತ್ಯ ವಾಹನ ಸವಾರರು ಕಸ ಎಸೆದು ಹೋಗುವ ಕುರಿತು ಮಾಹಿತಿ ನೀಡಿದ್ದರು. ಹಲವಾರು ಬಾರಿ ಸ್ಥಳವನ್ನು ಸ್ವಚ್ಛಗೊಳಿಸಿದರು ತ್ಯಾಜ್ಯ ಎಸೆಯುವುದು ನಿಂತಿರಲಿಲ್ಲ. ಇತ್ತೀಚೆಗೆ ಕಳೆದ ಕೆಲ ಸಮಯದಿಂದ ಹಸಿರು ದಳ ಸಂಸ್ಥೆಯ ಸದಸ್ಯರು ಈ ಜಾಗದಲ್ಲಿ ಪ್ಲೆಕಾರ್ಡ್ ಹಿಡಿದು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಕಾರ್ಯ ಶ್ಲಾಘನೀಯ'' ಎಂದು ಶಾಸಕ ಕಾಮತ್ ಹೇಳಿದರು.
ಸ್ವಚ್ಚತಾ ಕಾರ್ಯಗಳು ಸೀಮಿತ ಸಂಸ್ಥೆಗಳು ಅಥವ ವ್ಯಕ್ತಿಯಿಂದ ಆಗುವಂತದ್ದಲ್ಲ. ಪ್ರತಿಯೊಬ್ಬ ಭಾರತೀಯರಿಗೂ ತನ್ನದೇ ಆದ ಜವಬ್ದಾರಿಗಳಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ತ್ಯಾಜ್ಯಗಳನ್ನು ಎಸೆಯುವುದರಿಂದ ವಿವಿಧ ಸಮಸ್ಯೆಗಳು ತಲೆದೋರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸ್ವಚ್ಚತೆಯ ನಿಟ್ಟಿನಲ್ಲಿ ಚಿಂತಿಸಬೇಕು. ಆ ಮೂಲಕ ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಶಾಸಕ ಕಾಮತ್ ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ವೀಣಾ ಮಂಗಳ, ಹಸಿರು ದಳ ಸಂಸ್ಥೆಯ ನಾಗರಾಜ್ ಬಜಾಲ್, ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಶನಿವಾರ ಕರ್ನಾಟಕ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಗಳು ಕೂಡಾ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಸುಮಾರು 30 ಕ್ಕೂ ಅಧಿಕ ಸಿಬ್ಬಂದಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.