ಮಂಗಳೂರು, ಜ.23 (DaijiworldNews/HR): ಜನವರಿ 19ರಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಅಕ್ಷಯ್ ಶ್ರೀಧರ್, ಐಎಎಸ್ ರವರಿಂದ ಮೈ ಸಿಟಿ ಮೈ ಬಜೆಟ್ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮಂಗಳೂರು ಮಹಾನಗರ ಪಾಲಿಕೆ ಬಜೆಟ್ ವಾರ್ಡ್ ಗಳಲ್ಲಿ ಹೇಗೆ ಬಳಸಬೇಕೆಂದು ನಾಗರಿಕರು, ಜನ ಪ್ರತಿನಿಧಿಗಳು, ವಸತಿ ಸಂಘಗಳು, ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡಂತೆ ಅನೇಕರು, ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. ಈ ಅಭಿಯಾನವನ್ನು ನಡೆಸಿದ ಜನಾಗ್ರಹ ಸಂಸ್ಥೆಯು, ಮೂರು ದಿನಗಳ ಅವಧಿಯಲ್ಲಿ ಸುಮಾರು 1060 (856 ಆನ್ಲೈನ್ ಮತ್ತು 204 ಲಿಖಿತ) ಸಲಹೆಗಳನ್ನು ಸಂಗ್ರಹಿಸಿದೆ.







ಸಾರ್ವಜನಿಕರ ಅಭಿಪ್ರಾಯದಂತೆ ರಸ್ತೆಗಳ ನಿರ್ಮಾಣ ಹಾಗು ರಿಪೇರಿ, ಘನ ತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ಕಾಮಗಾರಿಯು ಮಂಗಳೂರು ಮಹಾನಗರ ಪಾಲಿಕೆ ಗಮನ ನೀಡಬೇಕಾದ ಮತ್ತು ಹಣವನ್ನು ವೆಚ್ಛಗೊಳಿಸಬೇಕಾಗಿರುವ ಮೂರು ಮುಖ್ಯ ಕೆಲಸಗಳು. ಶೇಕಡಾ 27ರಷ್ಟು ನಾಗರಿಕರು ರಸ್ತೆಗಳನ್ನು ತಮ್ಮ ಮುಖ್ಯ ಆದ್ಯತೆಯನ್ನಾಗಿ ಗುರುತಿಸಿದ್ದು, ಶೇಕಡಾ 20ರಷ್ಟು ನಾಗರಿಕರು ಘನತ್ಯಾಜ್ಯ ನಿರ್ವಹಣೆಯನ್ನು ಹಾಗು ಶೇಕಡಾ 16ರಷ್ಟು ನಾಗರಿಕರು ಒಳಚರಂಡಿ ಕಾಮಗಾರಿಗಾಗಿ ಸಾರ್ವಜನಿಕ ನಿಧಿಯನ್ನು ಬಳಸಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದಾರೆ.
"ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶ ದೊರೆತಲ್ಲಿ, ಅದರ ಬಳಕೆಯನ್ನು ಉತ್ತಮ ರೀತಿಯಲ್ಲಿ ಮಾಡಲಾಗುವುದೆಂದು ಮಂಗಳೂರಿನ ನಿವಾಸಿಗಳು ತೋರಿಸಿದ್ದಾರೆ. ಮೇಯರ್, ಉಪ ಮೇಯರ್ ಹಾಗು ಕಾರ್ಪೊರೇಟರ್ ಗಳು ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಲು ಆಯುಕ್ತರೊಂದಿಗೆ ಸಹಭಾಗಿಯಾದದ್ದು ಸಂತೋಷದಾಯಕ ವಿಷಯವಾಗಿದೆ. ಮುಂದಿನ ಕೆಲಸದ ಸರದಿಯು ಈಗ ಮಹಾನಗರ ಪಾಲಿಕೆಯದ್ದಾಗಿದೆ" ಎಂದು ಜನಾಗ್ರಹದ ಸಾರ್ವಜನಿಕ ಅಭಿಪ್ರಾಯ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್ ಅಳವಳ್ಳಿಯವರು ಹೇಳಿದ್ದಾರೆ.
ಎಲ್ಲಾ ಅಭಿಪ್ರಾಯಗಳನ್ನು ಕೇವಲ 72 ಗಂಟೆಗಳ ಅವಧಿಯಲ್ಲಿ ಸಂಗ್ರಹಿಸಲಾಗಿದ್ದು, ಈ ಕೆಲಸವನ್ನು ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆಯಾದ ಜನಾಗ್ರಹ ಮಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಡೆಸಿದೆ.
ಇನ್ನು ಈ ಸಾರ್ವಜನಿಕರ ಸಲಹೆ, ಅಭಿಪ್ರಾಯ, ಸೂಚನೆಗಳನ್ನು ಮಂಗಳೂರಿನ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಅಕ್ಷಯ್ ಶ್ರೀಧರ್, ಐಎಎಸ್ ಮತ್ತು ತೆರಿಗೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ರವರಿಗೆ ಶನಿವಾರದಂದು ಸಲ್ಲಿಸಲಾಯಿತು.
“ನಾವು ಜನಾಗ್ರಹದಿಂದ ಮೈ ಸಿಟಿ ಮೈ ಬಜೆಟ್ ವರದಿಯನ್ನು ಸ್ವೀಕರಿಸಿದ್ದೇವೆ. ಈ ಬಾರಿ ನಾವು ಈ ಸಾರ್ವಜನಿಕ ಸಲಹೆ ಅಭಿಪ್ರಾಯಗಳ ದಾಖಲೆಯ ಮೂಲಕ ಹೋಗುತ್ತೇವೆ, ನಾಗರಿಕರು ಸಲ್ಲಿಸಿದ ಸಲಹೆಗಳು ಮತ್ತು ಆದ್ಯತೆಗಳನ್ನು ಪರಿಶೀಲಿಸುತ್ತೇವೆ. ಮೈ ಸಿಟಿ ಮೈ ಬಜೆಟ್ ವರದಿಯು ನಾಗರಿಕರಿಗೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಯೋಜನೆ ರೂಪಿಸಲು, ಬಜೆಟ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ನಮ್ಮ ಸಭೆಯಲ್ಲಿ ಚರ್ಚಿಸಲು ಸಹಾಯ ಮಾಡುತ್ತದೆ ”ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಅಕ್ಷಯ್ ಶ್ರೀಧರ್, ಐಎಎಸ್ ಹೇಳಿದರು.
"ಮೈ ಸಿಟಿ ಮೈ ಬಜೆಟ್ ಅಭಿಯಾನದ ಮೂಲಕ ನಗರದ ಬಜೆಟ್ ನ ಹಂಚಿಕೆಯಲ್ಲಿ ತಮ್ಮ ಆದ್ಯತೆಗಳನ್ನು ಗುರುತಿಸಿದ ಮಂಗಳೂರಿನ ನಾಗರಿಕರು, ಅಲ್ಪಾವಧಿಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಮೊದಲ ಹೆಜ್ಜೆಯು ಅದ್ಭುತವಾಗಿದ್ದು, ಮುಂಬರುವ ದಿನಗಳಲ್ಲಿ ಹಾಗು ತಿಂಗಳುಗಳಲ್ಲಿ ಇದೊಂದು ಒಳ್ಳೆಯ ನಿದರ್ಶನವಾಗಿರಲಿದೆ" ಎಂದು ಜನಾಗ್ರಹ ಸಂಸ್ಥೆಯ ಸಪ್ನಾ ಕರೀಂ ರವರು ಅಭಿಪ್ರಾಯಪಟ್ಟರು.