ಕಾರ್ಕಳ, ಜ.24 (DaijiworldNews/HR): ಅತ್ತೂರು ಸಂತಲಾರೆನ್ಸ್ ಚರ್ಚ್ನಲ್ಲಿ ವಾರ್ಷಿಕ ಮಹೋತ್ಸವದ ಆರನೇ ದಿನವಾದ ಶನಿವಾರ ವಾರಾಂತ್ಯವಾದ್ದರಿಂದ ಬಲಿಪೂಜೆಗಳಿಗೆ ಭಕ್ತಾದಿಗಳ ಹಾಜರಾತಿ ಗಣನೀಯವಾಗಿ ಹೆಚ್ಚಿತ್ತು.



ಈ ವೇಳೆ ವಾರ್ಷಿಕ ಮಹೋತ್ಸವದಲ್ಲಿ ಪೂಜೆಯನ್ನು ನೆರವೇರಿಸಿ ಬಳಿಕ ಮಾತನಾಡಿದ ಮಂಗಳೂರು ಸಂತ ಜೊಸೆಫ್ ಗುರುಮಠದ ಪ್ರಾಧ್ಯಾಪಕ ಫಾದರ್ ಐವನ್ ಡಿಸೋಜಾ, ಸಮಾಜದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಘಾಯಗೊಂಡವರನ್ನು ಸಂತೈಸಿ ಸೇವೆಗೈದು ಪ್ರತಿಯೊಬ್ಬರನ್ನು ತನ್ನ ಸಹೋದರ ಸಹೋದರಿ ಎಂದು ಒಪ್ಪಿಕೊಳ್ಳುವುದರಿಂದ ಈ ಲೋಕವು ಜೀವಿಸಲು ಸುಂದರವಾದ ತಾಣವಾಗುತ್ತದೆ" ಎಂದರು.
ಜಾತ್ರೆ-ಸಂತೆ, ಜನಜಂಗುಳಿ, ವಾಹನದಟ್ಟಣೆ ಇವ್ಯಾವುದೂ ಇಲ್ಲದ ವಾತಾವರಣದಲ್ಲಿ ನಡೆಯುತ್ತಿರುವ ಅತ್ತೂರು ಕಾರ್ಕಳದ ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವವು ವಿಭಿನ್ನ ಹಾಗೂ ವಿಶಿಷ್ಠ ಅನುಭವವನ್ನು ನೀಡುತ್ತಿದೆ. ಶಾಂತ ವಾತಾವರಣವು ಪ್ರಾರ್ಥನೆಗೆ ಸೂಕ್ತವಾದ್ದರಿಂದ ಭಕ್ತಾದಿಗಳು ಪೂಜೆ ನಡೆದ ಬಳಿಕವೂ ಬಹಳಷ್ಟು ಹೊತ್ತು ಬಸಿಲಿಕದ ಒಳಗಡೆ ಹಾಗೂ ವಠಾರದ ಚಪ್ಪರದ ಕೆಳಗೆ ಕುಳಿತುಕೊಂಡು ಸಮಯವನ್ನು ಕಳೆಯುತ್ತಿದ್ದಾರೆ.
ಇನ್ನು ಶಾಂತ ವಾತಾವರಣದಲ್ಲಿ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ಹಾಗೂ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆಗಳು ನಡೆದವು. ಸಂತ ಲಾರೆನ್ಸರ ಪವಿತ್ರ ಅವಶೇಷದ ಪ್ರದರ್ಶನ ಹಾಗೂ ಭಕ್ತರಿಗೆ ಆಶೀರ್ವಚನ ಕಾರ್ಯಕ್ರಮವೂ ನಡೆಯಿತು.
ಶನಿವಾರದ ಬಲಿಪೂಜೆಗಳನ್ನು ಬಜಾಲ್ನ ಫಾದರ್ ರೊನಾಲ್ಡ್ ಪಿಂಟೊ, ಮೂಡುಬೆಳ್ಳೆ ಗುರುಮಠದ ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್, ಕೊಳಲಗಿರಿಯ ಫಾದರ್ ಅನಿಲ್ ಪ್ರಕಾಶ್ ಕಾಸ್ತೆಲಿನೊ, ಮಂಗಳೂರಿನ ಸಂತ ಜೊಸೆಫ್ ಗುರುಮಠದ ಫಾದರ್ ಐವನ್ ಡಿಸೋಜಾ ಹಾಗೂ ಮಂಗಳೂರು ಧರ್ಮಪ್ರಾಂತದ ಫಾದರ್ ಜೊಕಿಮ್ ಫೆರ್ನಾಂಡಿಸ್ರವರು ನೆರವೇರಿಸಿದರು.
ಮಹೋತ್ಸವದ ಏಳನೇ ದಿನವಾದ ರವಿವಾರ 10 ಗಂಟೆಯ ಸಂಭ್ರಮದ ಬಲಿಪೂಜೆಯನ್ನು ಶಿವಮೊಗ್ಗದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊರವರು ನೆರವೇರಿಸಲಿದ್ದಾರೆ.