ಕಾಸರಗೋಡು,ಜ.24 (DaijiworldNews/HR): ಅಶ್ವಿನಿ ನಗರದಲ್ಲಿ ವ್ಯಕ್ತಿಯೋರ್ವನನ್ನು ಥಳಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಪ್ರಕರಣಗಳು ದಾಖಲಾಗಿದ್ದು, ಸಿಸಿಟಿವಿ ದ್ರಶ್ಯಗಳನ್ನು ಕಲೆ ಹಾಕಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




ಯುವತಿಯನ್ನು ಚುಡಾಯಿಸಿದ ಘಟನೆ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಚುಡಾವಣೆ ಬಗ್ಗೆ ಯುವತಿ ಮಹಿಳಾ ಸೆಲ್ಗೂ ದೂರು ನೀಡಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಆಸ್ಪತ್ರೆ ಸಮೀಪ ಚುಡಾವಣೆಗೆ ಯತ್ನಿಸಿರುವುದಾಗಿ ಆರೋಪಿಸಿ ಯುವತಿ ಬೊಬ್ಬೆ ಹಾಕಿದ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ಮುಹಮ್ಮದ್ ರಫೀಕ್ ರನ್ನು ಪ್ರಶ್ನಿಸಿದ್ದಾರೆ. ಇದಾದ ಬಳಿಕ ವಾಗ್ವಾದ ನಡೆದಿದೆ. ಬಳಿಕ ರಫೀಕ್ ಅಲ್ಲಿಂದ ತೆರಳುತ್ತಿದ್ದಾಗ ಗುಂಪೊಂದು ಬೆನ್ನಟ್ಟಿ ಥಳಿಸಿದೆ. ಈ ಸಂದರ್ಭದಲ್ಲಿ ಕುಸಿದು ಬಿದ್ದ ರಫೀಕ್ ರನ್ನು ಸಮೀಪದ ಆಸ್ಪತ್ರೆಗೆ ತಲಪಿಸಲಾಯಿತಾದರೂ ಆಗಲೇ ಮೃತಪಟ್ಟಿದ್ದರು. ರಫೀಕ್ ರನ್ನು ಬೆನ್ನಟ್ಟಿ ಥಳಿಸುವ ದ್ರಶ್ಯಗಳು ಸಿಸಿಟಿವಿಯಿಂದ ಲಭಿಸಿದೆ. ಆದರೆ ರಫೀಕ್ ಥಳಿತದಿಂದ ಮೃತಪಟ್ಟದ್ದೆ ಅಥವಾ ಹೃದಯಾಘಾತದಿಂದ ಮೃತಪಟ್ಟದ್ದೇ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಹದಲ್ಲಿ ಯಾವುದೇ ಗಾಯ ಕಂಡು ಬರದಿರುವುದರಿಂದ ಮರಣೋತ್ತರ ಪರೀಕ್ಷಾ ವರದಿ ಬಳಿಕವಷ್ಟೇ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ದೇಳಿ ನಿವಾಸಿಯಾಗಿದ್ದ ಮುಹಮ್ಮದ್ ರಫೀಕ್ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದೆ.
ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಗಿದ್ದು, ಇಂದು ಮರಣೋತ್ತರ ಪರೀಕ್ಷಾ ವರದಿ ಲಭಿಸಲಿದೆ.