ಮಂಗಳೂರು, ಜ.24 (DaijiworldNews/MB) : ಉಳ್ಳಾಲ ಪ್ಯಾರಿಸ್ ಜಂಕ್ಷನ್ ಬಳಿ ಇರುವ ಕಾರಣಿಕ ದೈವಗಳಾದ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಅಶ್ಲೀಲ ವಸ್ತುಗಳನ್ನು ಹಾಕಿ ವಿಕೃತಿ ಮೆರೆದು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಪ್ರಕರಣ ಖಂಡನೀಯವಾಗಿದ್ದು ಈ ಕೃತ್ಯವೆಸಗಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ನಿಯೋಗ ಇಂದು ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿ ಒತ್ತಾಯಿಸಿತು.

ಕಿಡಿಗೇಡಿಗಳ ಈ ಕೃತ್ಯದಿಂದ ಕೊರಗಜ್ಜ, ಗುಳಿಗಜ್ಜ ದೈವಗಳನ್ನು ಆರಾಧಿಸುವ ಭಕ್ತರ ಮನಸ್ಸಿಗೆ ಮತ್ತು ಧಾರ್ಮಿಕ ನಂಬಿಕೆಗಳನ್ನು ಗೌರವಿಸುವ ಜನಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಕಿಡಿಗೇಡಿಗಳು ಸಮಾಜದಲ್ಲಿ ಧಾರ್ಮಿಕ ಸಂಘರ್ಷವನ್ನು ಹುಟ್ಟು ಹಾಕುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾರೆ. ಪೊಲೀಸ್ ಇಲಾಖೆ ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗುತ್ತಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆ ನಿಗಾ ವಹಿಸುವಂತೆಯೂ ನಿಯೋಗ ಒತ್ತಾಯಿಸಿತು.
ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಕಾರ್ಯದರ್ಶಿ ಸುನಿಲ್ ತೇವುಲ, ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಜೊತೆ ಕಾರ್ಯದರ್ಶಿ, ವಕೀಲ ನಿತಿನ್ ಕುತ್ತಾರ್, ಡಿವೈಎಫ್ಐ ಮುಡಿಪು ಘಟಕದ ಅಧ್ಯಕ್ಷ ರಝಾಕ್ ಮುಡಿಪು, ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಜ್ ಉರುಮಣೆ ಉಪಸ್ಥಿತರಿದ್ದರು.