ಬೆಂಗಳೂರು, ಜು 05: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಸರಕಾರದ ಮೊದಲ ಬಜೆಟ್ ಗುರುವಾರ ಮಂಡನೆ ಮಾಡಿದ್ದು ಪೆಟ್ರೋಲ್, ಡೀಸೆಲ್ ಮತ್ತು ಮದ್ಯದ ಮೇಲಿನ ಮಾರಾಟ ತೆರಿಗೆಯನ್ನು ಏರಿಕೆ ಮಾಡಿದ್ದಾರೆ. ಪೆಟ್ರೋಲ್ ಮೇಲಿನ ಸೆಸ್ ಶೇಕಡಾ 30 ರಿಂದ 32ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ದರ 1.14 ರೂಪಾಯಿ ಹೆಚ್ಚಳವಾಗಲಿದೆಅಲ್ಲದೆ ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 19 ರಿಂದ 21ಕ್ಕೆ ಏರಿಕೆ ಮಾಡಿದ್ದು, ಇದರಿಂದಾಗಿ ಕರ್ನಾಟಕದಲ್ಲಿ ಡೀಸೆಲ್ ಬೆಲೆ 1.12 ರೂಪಾಯಿಯಷ್ಟು ಏರಿಕೆಯಾಗಲಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕುಮಾರಸ್ವಾಮಿಯವರು ರೈತರ ಸಾಲಮನ್ನಾಕ್ಕೆ ಕ್ರಮ ಕೈಗೊಂಡಿದ್ದು ಸರಕಾರದ ಬೊಕ್ಕಸ ತುಂಬಿಸಲು ಪೆಟ್ರೋಲ್, ಡೀಸೆಲ್, ವಿದ್ಯುತ್, ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದಾರೆ. ಬಜೆಟ್ ಮಂಡನೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ , ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕರ್ನಾಟಕದಲ್ಲಿ ಕಡಿಮೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.