ಕಾರ್ಕಳ, ಜ 21(DaijiworldNews/SM): ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದ ಏಳನೇ ದಿನದ ಬಲಿಪೂಜೆಗಳು ಸಂಭ್ರಮದಿಂದ ಜರಗಿದವು. ರವಿವಾರವಾಗಿದ್ದರಿಂದ ಬಲಿಪೂಜೆಗಳಿಗೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿತ್ತು. ಬಸಿಲಿಕದೊಳಗೆ ಸಾಮಾಜಿಕ ಅಂತರವನ್ನು ಕಾಪಾಡಿ ಸ್ಥಳಾವಕಾಶ ಕಲ್ಪಿಸಲಾಗಿತ್ತು.








ಉಳಿದಂತೆ ಇತರ ಭಕ್ತಾದಿಗಳಿಗೆ ಹೊರಗಿನ ಆವರಣದಲ್ಲಿ ಎಲ್ಇಡಿ ಪರದೆಯ ಸಹಾಯದಿಂದ ಬಲಿಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಪೂಜಾಂತ್ಯದಲ್ಲಿ ಸಂತ ಲಾರೆನ್ಸರ ಪವಿತ್ರ ಅವಶೇಷದ ಪ್ರದರ್ಶನ ಹಾಗೂ ಆಶೀರ್ವಚನ ನೀಡಲಾಯಿತು. ಸಹಸ್ರ ಸಂಖ್ಯೆಯ ಭಕ್ತರು ಸಂತ ಲಾರೆನ್ಸರ ಕೃಪಾಶೀರ್ವಾದಗಳಿಗೆ ಪಾತ್ರರಾದರು. ದಿನದ ಪ್ರಮುಖ ಬಲಿಪೂಜೆಯನ್ನು ಶಿವಮೊಗ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊ ನೆರವೇರಿಸಿದರು.
“ತನ್ನಲ್ಲಿರುವ ಹಣವನ್ನು ಮತ್ತು ಆಸ್ತಿಯನ್ನು ಬಡವರಿಗೆ ದಾನ ಮಾಡುವುದು ನಿಜಕ್ಕೂ ಶ್ರೇಷ್ಠ. ಆದರೆ ತನ್ನ ಪ್ರಾಣವನ್ನೇ ಇತರರಿಗಾಗಿ ಮುಡಿಪಾಗಿಟ್ಟು ಸಮರ್ಪಣೆಗೈಯ್ಯುವುದು ಅತ್ಯಂತ ಶ್ರೇಷ್ಠ ತ್ಯಾಗ. ಸಂತ ಲಾರೆನ್ಸರು ತಮ್ಮ ಜೀವದ ಬಲಿಯನ್ನು ಅರ್ಪಿಸಿ ಅಮರರಾದರು” ಎಂದು ಅವರು ಪ್ರತಿಪಾದಿಸಿದರು.
ಭಾನುವಾರದ ಬಲಿಪೂಜೆಗಳನ್ನು ಉಡುಪಿ ಸೈಂಟ್ ಮೇರಿಸ್ ಹೈಸ್ಕೂಲಿನ ಪ್ರಾಂಶುಪಾಲ ಫಾದರ್ ಜಾನ್ಸನ್ ಸಿಕ್ವೇರಾ, ಕೆಮ್ಮಣ್ಣಿನ ಫಾದರ್ ಹೆರಾಲ್ಡ್ ಪಿರೇರಾ ಹಾಗೂ ಮಂಗಳೂರು ಧರ್ಮಪ್ರಾಂತದ ಶ್ರೇಷ್ಠಗುರು ಫಾದರ್ ಮ್ಯಾಕ್ಸಿಮ್ ನೊರೋನ್ಹಾ ನೆರವೇರಿಸಿದರು. ಮಧ್ಯಾಹ್ನದ ಕನ್ನಡ ಬಲಿಪೂಜೆಯನ್ನು ಶಿವಮೊಗ್ಗದ ಹಿರಿಯೂರಿನ ಫಾದರ್ ನೆಲ್ಸನ್ ಡಿ'ಸೋಜಾರವರು ನೆರವೇರಿಸಿದರು. ದಿನದ ಪ್ರಮುಖ ಬಲಿಪೂಜೆಯನ್ನು ಬೆಳಗ್ಗೆ 10 ಗಂಟೆ ಶಿವಮೊಗ್ಗದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೊ ಅರ್ಪಿಸಿದರು.
ಮಹೋತ್ಸವದ ಎಂಟನೇ ದಿನವಾದ ಸೋಮವಾರ 10 ಗಂಟೆಯ ಸಂಭ್ರಮದ ಬಲಿಪೂಜೆಯನ್ನು ಮಂಗಳೂರಿನ ವಿಶ್ರಾಂತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಅಲೋಶಿಯಸ್ ಪಾವ್ಲ್ ಡಿ'ಸೋಜಾರವರು ನೆರವೇರಿಸಲಿದ್ದಾರೆ. ಉಳಿದಂತೆ ಬೆಳಗ್ಗೆ 8, 12 ಹಾಗೂ ಮಧ್ಯಾಹ್ನ 3 ಮತ್ತು ಸಂಜೆ 5 ಗಂಟೆಯ ಬಲಿಪೂಜೆಗಳು ನೆರವೇರಲಿವೆ.