ಜು, 05: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಸರಕಾರದ ಮೊದಲ ಬಜೆಟ್ ಗುರುವಾರ ಮಂಡನೆ ಮಾಡಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸಂಪುಟ ಸಭೆ ಬಳಿಕ ರ 11:30 ಬಜೆಟ್ ಭಾಷಣ ಆರಂಭಿಸಿದ ಅವರು ಒಂದು ಗಂಟೆ 45 ನಿಮಿಷಗಳ ಬಜೆಟ್ ಮಂಡಿಸಿದರು. ಅದರೆ ತಮ್ಮ ಸುದೀರ್ಘ ಬಜೆಟ್ ನಲ್ಲಿ ಕರಾವಳಿಯನ್ನ ಕಡೆಗಣಿಸಿದ್ದು ಇದೀಗ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
2,18,488 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ನಲ್ಲಿ ಬೆಂಗಳೂರು, ಮಂಡ್ಯ, ಹಾಸನ, ರಾಮನಗರ, ಮೈಸೂರು ಭಾಗಗಳಿಗೆ ಹೆಚ್ಚಿನ ಒತ್ತನ್ನು ನೀಡಿರುವ ಅವರು ಕರಾವಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎನ್ನುವ ಕೂಗೂ ಉಭಯ ಜಿಲ್ಲೆಯ ಜನರಿಂದ ಕೇಳಿ ಬರುತ್ತಿದೆ. ಕುಮಾರಸ್ವಾಮಿ ತಾವು ಮಂಡಿಸಿದ ಸಂಪೂರ್ಣ ಬಜೆಟ್ ನಲ್ಲಿ ಎಲ್ಲಿಯೂ ಕೂಡಾ “ಕರಾವಳಿ ” ಎನ್ನುವ ಪದವನ್ನೇ ಬಳಸದೆ ಚುನಾವಣೆಯ ಫಲಿತಾಂಶದ ಪ್ರತಿಕಾರ ಸಾಧಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅಂತೆಯೇ ಉಡುಪಿಯಲ್ಲಿಯೂ 5 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲವೂ ಬಿಜೆಪಿ ಗೆದ್ದುಕೊಂಡಿದೆ. ಹೀಗಾಗಿ ಕರಾವಳಿಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ , ಮುಖ್ಯಮಂತ್ರಿ ಕುಮಾರಸ್ವಾಮಿ ಮುಖಾಂತರ ಕರಾವಳಿಗೆ ಯಾವುದೇ ಅಭಿವೃದ್ದಿ ಯೋಜನೆಗಳು ಬಾರದಂತೆ ಮಾಡಿ ಕರಾವಳಿಯ ಜನರ ಮೇಲೆ ತಮುನಿಸು ಸಾಧಿಸಿದೆ ಎನ್ನಲಾಗುತ್ತಿದೆ.