ಮಂಗಳೂರು, ಜ.25 (DaijiworldNews/MB) : "ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ದೇಶದ ರೈತರು ಮತ್ತು ಕಾರ್ಮಿಕ ವರ್ಗದ ಪರವಾಗಿಲ್ಲ, ಕಾರ್ಪೊರೇಟ್ಗಳತ್ತ ಒಲವು ಹೊಂದಿದೆ" ಎಂದು ಮಾಜಿ ಎಂಎಲ್ಸಿ ಮತ್ತು ಕೆಪಿಸಿಸಿ ವಕ್ತಾರ ಐವಾನ್ ಡಿಸೋಜಾ ಹೇಳಿದರು.




ಕೇಂದ್ರ ಬಿಜೆಪಿ ಸರಕಾರದ ರೈತ ವಿರೋಧಿ ನೀತಿ ಮತ್ತು ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ನವರು ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.
ದೇಶಾದ್ಯಂತ ಕಾಂಗ್ರೆಸ್ ಪಕ್ಷವು ಚಳವಳಿ ನಿರತ ರೈತರನ್ನು ಬೆಂಬಲಿಸಿ ಹೋರಾಟ ಹಮ್ಮಿಕೊಂಡಿದ್ದು, ಕರ್ನಾಟಕ ಕಾಂಗ್ರೆಸ್ ಪಕ್ಷವು ರಾಜ್ಯ ಮಟ್ಟದಲ್ಲಿ ಮತ್ತು ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ತೆಗೆದುಕೊಂಡಿತ್ತು. ಅದರಂತೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವತಿಯಿಂದ ಜನವರಿ 25ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಕಾರ್ಯದರ್ಶಿ ಐವಾನ್ ಡಿಸೋಜಾ ಅವರು, ''ಮೋದಿಯವರಿಗೆ ಅಂಬಾನಿ, ಅದಾನಿಯಂಥ ನಾಲ್ಕು ಜನ ಉದ್ಯಮಿಗಳು ಇದ್ದರೆ ಸಾಕು. ಜನಸಾಮಾನ್ಯರ ಬಗೆಗೆ ಈ ಸರಕಾರಕ್ಕೆ ಅಕ್ಕರೆ ಇಲ್ಲ. ರೈತರು ಉಳಿಯಲು ಎಪಿಎಂಸಿ ಬೇಕು, ಕನಿಷ್ಟ ಬೆಂಬಲ ಬೆಲೆ ಇರಬೇಕು, ಸಮೀಪದಲ್ಲಿ ನ್ಯಾಯ ಬೆಲೆಯಲ್ಲಿ ಕೃಷ್ಯುತ್ಪನ್ನ ಕೊಳ್ಳುವವರು ಬೇಕು. ಆದರೆ ಮೋದಿ ಸರಕಾರವು ಉದ್ಯಮಿಗಳ ಪರವಾಗಿ ಇವನ್ನೆಲ್ಲ ನಾಶಮಾಡಿ ರೈತರನ್ನು ಮುಗಿಸಲು ಹೊರಟಿದೆ'' ಎಂದು ಹೇಳಿದರು.
ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಾಜೀ ಶಾಸಕರಾದ ಜೆ. ಆರ್. ಲೋಬೋ ಮಾತನಾಡಿ, ''ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರೈತರನ್ನು ವಂಚಿಸುತ್ತಲಿವೆ. ಎರಡು ತಿಂಗಳಿನಿಂದ ರೈತರು ಬೀದಿಯಲ್ಲಿ ಇದ್ದಾರೆ, ಅರುವತ್ತು ರೈತರು ಚಳವಳಿ ಮಾಡುತ್ತ ಮರಣ ಹೊಂದಿದ್ದಾರೆ. ಆದರೆ ಮೋದಿ ಸರಕಾರವು ಮಾನವೀಯತೆ ಇಲ್ಲದೆ ರೈತರನ್ನು ನಡೆಸಿಕೊಳ್ಳುತ್ತಲಿದೆ. ರೈತರಿಗೆ ನ್ಯಾಯ ಕೊಡದ ಬಿಜೆಪಿ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇಲ್ಲ. ಕಾಂಗ್ರೆಸ್ ಸರಕಾರ ಸಾಧಿಸಿದ ಕೃಷಿ ಕ್ರಾಂತಿ, ಭೂಸುಧಾರಣೆ ಎಲ್ಲವನ್ನೂ ಬಿಜೆಪಿ ನಾಶ ಪಡಿಸುತ್ತಲಿದೆ'' ಎಂದರು.
ಸ್ಥಳೀಯ ಕಾರ್ಪೊರೇಟರ್ ವಿನಯರಾಜ್ ಮಾತನಾಡಿದರು. ಪ್ರತಿಭಟನೆಯಲ್ಲಿ ನಮಿತಾ ರಾವ್, ಗೀತಾ, ಮರಿಯಮ್ಮ ಥಾಮಸ್, ಮಂಜುಳ ನಾಯಕ್, ಜೀನತ್ ಸಂಶುದ್ದೀನ್, ಶಶಿಧರ ಹೆಗ್ಡೆ, ಕೇಶವ ಮರೋಳಿ, ನೀರಜ್ ಪಾಲ್, ಭರತೇಶ್ ಅಮೀನ್, ಟಿ. ಕೆ. ಸುಧೀರ್, ವಿಶ್ವಾಸ್ ದಾಸ್, ಯೂಸುಫ್ ಉಚ್ಚಿಲ, ಗಣೇಶ ರಾವ್ ಮೊದಲಾದವರು ಸೇರಿದ್ದರು.