ಕಾರ್ಕಳ,ಜ.25 (DaijiworldNews/HR): ರಸ್ತೆಯಲ್ಲಿ ಘಾಯಗೊಂಡು ಬಿದ್ದಿದ್ದ ಅಪರಿಚಿತ ಮನುಷ್ಯನನ್ನು ಎತ್ತಿ, ಉಪಚರಿಸಿ ಶುಶ್ರೂಷೆಗೈದ ದಯಾಳು ಸಮಾರಿತನಂತೆ ನಾವು ಧರ್ಮ, ದೇಶ ಹಾಗೂ ಸಂಸ್ಕೃತಿಯ ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಅಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದರು.






ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದಲ್ಲಿ ಪ್ರಮುಖ ಪೂಜೆಯನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ನಿಗದಿತ ಐದು ಪೂಜೆಗಳು ನಿರಾತಂಕವಾಗಿ ನಡೆದವು. ನೂರಾರು ಭಕ್ತರು ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ವೀಕ್ಷಿಸಿ ಆಶೀರ್ವಚನವನ್ನು ಪಡೆದರು.
ಕಥೋಲಿಕ್ ಸಭಾ ಹಾಗೂ ಮಹಿಳಾ ಸಂಘಟನೆಯ ಸದಸ್ಯರು ಸ್ವಯಂಸೇವಕರಾಗಿ ಭಕ್ತಾದಿಗಳಿಗೆ ಮಾರ್ಗದರ್ಶನವನ್ನು ನೀಡಿದರು.
ದಿನದ ಪ್ರಮುಖ ಬಲಿಪೂಜೆಯನ್ನು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಅಲೋಷಿಯಸ್ ಪಾವ್ಲ್ ಡಿಸೋಜಾರವರು ನೆರವೇರಿಸಿ ಪ್ರಬೋಧನೆಯನ್ನು ನೀಡಿದರು. ಇತರ ಬಲಿಪೂಜೆಗಳನ್ನು ಉದ್ಯಾವರದ ಸಹಾಯಕ ಗುರು ಫಾದರ್ ರಾಲ್ವಿನ್ ಆರಾನ್ಹಾ, ಬೊಂದೆಲ್ನ ಸಹಾಯಕ ಗುರು ಫಾದರ್ ರೂಪೇಶ್ ತಾವ್ರೊ, ಶಿರ್ವಾದ ಮುಖ್ಯಗುರು ಫಾದರ್ ಡೆನಿಸ್ ಡೆಸಾ
ಹಾಗೂ ಫಜೀರಿನ ಮುಖ್ಯಗುರು ಫಾದರ್ ಸುನಿಲ್ ವೇಗಸ್ರವರು ನೆರವೇರಿಸಿದರು.
ಇನ್ನು ಮಂಗಳವಾರ ಮಹೋತ್ಸವದ ಒಂಬತ್ತನೇ ದಿನದ ಕಾರ್ಯಕ್ರಮ ನಡೆಯಲಿದ್ದು, ಬಲಿಪೂಜೆಯನ್ನು ಬೆಳ್ತಂಗಡಿಯ ಧರ್ಮಾಧ್ಯಕ್ಷ ಪರಮಪೂಜ್ಯ ಲಾರೆನ್ಸ್
ಮುಕ್ಕುಝಿಯವರು ನೆರವೇರಿಸಲಿದ್ದಾರೆ.