ಮಂಗಳೂರು, ಜು06: ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಮುಗಿಯುವವರೆಗೆ ಮಂಗಳೂರಿನ ಕೆಎ 19 ನಂಬರ್ ಪ್ಲೇಟಿನ ಎಲ್ಲ ಖಾಸಗಿ ವಾಹನಗಳಿಗೆ ತಲಪಾಡಿ ಟೋಲ್ಗೇಟ್ನಲ್ಲಿ ಯಾವುದೇ ಶುಲ್ಕ ಸ್ವೀಕಾರ ಮಾಡಬಾರದು ಎಂದು ಸಂಸದ ನಳಿನ್ ಕುಮಾರ್ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರಧ ನವಯುಗ ಕಂಪನಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಆಮೆಗತಿಯಲ್ಲಿ ನಡೆಯುತ್ತಿರುವ ಪಂಪ್ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಸಹಿತ ತಲಪಾಡಿಯಿಂದ ಸುರತ್ಕಲ್ ತನಕದ ಕಾಮಗಾರಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಜಮಾಡಿ ಟೋಲ್ನಲ್ಲಿ ಕೆಎ 20 ಮತ್ತು ಎನ್ಐಟಿಕೆ ಟೋಲ್ನಲ್ಲಿ ಕೆಎ 19 ನಂಬರ್ ಪ್ಲೇಟ್ನ ವಾಹನಗಳಿಗೆ ಶುಲ್ಕ ಪಡೆಯುತ್ತಿಲ್ಲ. ಅದೇ ಮಾದರಿಯಲ್ಲಿ ಇನ್ನು ತಲಪಾಡಿ ಟೋಲ್ನಲ್ಲಿ ಕಮರ್ಷಿಯಲ್ ವಾಹನ ಬಿಟ್ಟು ಉಳಿದ ಕೆಎ 19 ನಂಬರ್ ಪ್ಲೇಟ್ನ ವಾಹನಗಳಿಗೆ ಶುಲ್ಕ ವಸೂಲಿ ಮಾಡಬಾರದು ಎಂದು ನಳಿನ್ ಸೂಚಿಸಿದ್ದಾರೆ.
ಕಂಪನಿಗೆ 1.5 ಕೋ.ರೂ. ದಂಡ ಹಾಕಲಾಗಿದೆ. ಆದರೂ ಕಂಪನಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇದೀಗ ಕೊನೆಯ ಬಾರಿಗೆ ಸೂಚನೆ ನೀಡಲಾಗುತ್ತಿದೆ. ಅದಕ್ಕೂ ಸ್ಪಂದಿಸದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ನಳಿನ್ ಎಚ್ಚರಿಕೆ ನೀಡಿದ್ದಾರೆ.