ಮಂಗಳೂರು, ಜ.26 (DaijiworldNews/PY): ಮಂಗಳೂರಿನ ಶಕ್ತಿ ನಗರದಲ್ಲಿ ನೆಲೆಸಿರುವ ಮಹಾರಾಷ್ಟ್ರದ ನಾಗ್ಪುರ ಮೂಲದ ಶ್ರದ್ಧಾ ಜಾವಲ್ಕರ್ ಅವರು ಪೂನಾದಲ್ಲಿ ಫೋರ್ಫೋಕ್ಸ್ ಪ್ರೊಡಕ್ಷನ್ಸ್ ಲಿ. ಸಂಸ್ಥೆಯು ಆಯೋಜಿಸಿದ್ದ 'ಮಿಸಸ್ ಗ್ಲ್ಯಾಮರ್ ಇಂಡಿಯಾ 2020' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.






ಜ.18,19ರಂದು ಗ್ರೂಮಿಂಗ್, ಜ.20ರಂದು ಸ್ಪರ್ಧೆ ನಡೆದಿತ್ತು. ವಿವಿಧ ಸುತ್ತುಗಳಲ್ಲಿ ನಡೆದ ಸ್ಪರ್ಧೆಯಲ್ಲಿ 40 ಮಂದಿ ಫೈನಲ್ಗೆ ತಲುಪಿದ್ದು, ನಂತರ ಫೈನಲ್ ಸ್ಪರ್ಧೆಯಲ್ಲಿ ಶ್ರದ್ಧಾ ಅವರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಅಲ್ಲದೇ, 'ಮಿಸಸ್ ಕಾನ್ಫ್ಡೆನ್ಸ್' ಪ್ರಶಸ್ತಿಯನ್ನು ಕೂಡಾ ಗೆದ್ದಿದ್ದಾರೆ.
ಗ್ರ್ಯಾಂಡ್ ಫೈನಲ್ನಲ್ಲಿ ಸೆಲೆಬ್ರಿಟಿ ಅತಿಥಿಯಾಗಿ ನಟ ನಾಗೇಶ್ ಭೋಸ್ಲೆ ಉಪಸ್ಥಿತರಿದ್ದರು.
ಶ್ರದ್ಧಾ ಅವರು ಈ ಹಿಂದೆ 'ಮಿಸಸ್ ಮಂಗಳೂರು 2018' ಸ್ಪರ್ಧೆಯ ಫೈನಲಿಸ್ಟ್ ಆಗಿದ್ದು, ಇದು ಅವರಿಗೆ ಈ ಕ್ಷೇತ್ರಕ್ಕೆ ಬರಲು ಸ್ಪೂರ್ತಿ ನೀಡಿತು. 2019ರಲ್ಲಿ ಅವರು 'ಮಿಸಸ್ ಸೆಂಟ್ರಲ್ ಇಂಡಿಯಾ' ಪ್ರಶಸ್ತಿ ಪಡೆದಿದ್ದರು.
ವಿವಿಧ ಫೋಟೋ ಶೂಟ್, ಜಾಹೀರಾತುಗಳಲ್ಲಿ ಪಾಲ್ಗೊಂಡಿದ್ದ ಅವರು 'ಮಿಸಸ್ ಮೀನಾ ಆಂಡ್ ಫ್ಯಾಮಿಲಿ' ಧಾರವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಶ್ರದ್ಧಾ ಅವರು ಮಂಗಳೂರಿನ ಶಕ್ತಿನಗರದಲ್ಲಿ ನೆಲೆಸಿದ್ದು, ಫಿಟ್ನೆಸ್ ಬಗ್ಗೆ ಆನ್ಲೈನ್ ತರಗತಿ ನಡೆಸುತ್ತಿದ್ದಾರೆ.
ದೈಜಿವಲ್ಡ್ ಜೊತೆ ಮಾತನಾಡಿದ ಶ್ರದ್ಧಾ, "ಅಪರ್ಣ ರಾಜಾವತ್, ಚೈತನ್ಯ ಗೋಖಲೆ ಅವರ ನೃತ್ಯ ಸಂಯೋಜನೆ ಮತ್ತು ಮಿಸ್ ಫೆಮಿನಾ ತರಬೇತುದಾರರಾದ ಚಂದ್ರಕಲಾ ಅವರಿಂದ ಬಹಳಷ್ಟು ಹೊಸ ವಿಷಯಗಳನ್ನು ಕಲಿತಿದ್ದೇವೆ. ಟಾಲೆಂಟ್ ಸುತ್ತಿನಲ್ಲಿ ನಾನು ಸಮಕಾಲೀನ ನೃತ್ಯ ಪ್ರಕಾರವನ್ನು ಪ್ರದರ್ಶಿಸಿದೆ. ಎಲ್ಲಾ ವಿಭಾಗದಲ್ಲಿ ಓರ್ವ ವಿಜೇತನನ್ನು ಘೋಷಣೆ ಮಾಡಿದ ಸಂದರ್ಭ ನನಗೆ ಆಶ್ಚರ್ಯವಾಯಿತು. ಅಂತಿಮವಾಗಿ, ನಾನು 'ಮಿಸಸ್ ಗ್ಲ್ಯಾಮರ್ ಇಂಡಿಯಾ 2020' ಪ್ರಶಸ್ತಿ ಹಾಗೂ ಒಂದು ಲಕ್ಷ ರೂ.ನಗದನ್ನು ಗೆದ್ದಿದ್ದೇನೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ" ಎಂದಿದ್ದಾರೆ.