ಕಾಪು, ಜ.26 (DaijiworldNews/MB) : ಕಾಪು ತಾಲೂಕಿನ ನೂತನ ಮಿನಿ ವಿಧಾನಸೌಧದ ಗುದ್ದಲಿ ಪೂಜೆಯನ್ನು ಕಂದಾಯ ಸಚಿವರಾದ ಆರ್. ಅಶೋಕ್ ರವರು ಸೋಮವಾರ, ಜನವರಿ 25ರಂದು ನೆರವೇರಿಸಿದರು.









ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ಅವರು, ''ಇನ್ನು ಮುಂದೆ ಪ್ರತಿ ತಿಂಗಳ ಮೂರನೇ ಶನಿವಾರ ಖುದ್ದು ಜಿಲ್ಲಾಧಿಕಾರಿಯವರು, ಎಸಿಗಳು, ತಹಶೀಲ್ದಾರ್ ಗಳು ಮತ್ತು ಇತರ ಇಲಾಖೆಯ ಅಧಿಕಾರಿಗಳು ಸಹಿತ ನಿಮ್ಮ ನಿಮ್ಮ ಹಳ್ಳಿಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕೂತು ಜನರ ಸಮಸ್ಯೆಯನ್ನು ಆಲಿಸಬೇಕು. ಅಲ್ಲದೆ ಅದೇ ಅಂಗನವಾಡಿ ಅಥವಾ ವಿದ್ಯಾರ್ಥಿ ನಿಲಯದಲ್ಲಿ ಊಟ ಮಾಡಬೇಕು. ಆಗ ಅರಿವಿಗೆ ಬರುತ್ತದೆ. ಆಗ ವ್ಯವಸ್ಥೆ ಸರಿಯಾದ ರೂಪಕ್ಕೆ ಬರುತ್ತದೆ, ಬರಲೇ ಬೇಕು ಎಂದರು. ಇದೆ ರೀತಿ ಮಾಡಿದರೆ ಇನ್ನೆರೆಡು ವರ್ಷದೊಳಗೆ ಪ್ರತಿ ಗ್ರಾಮ ಪಂಚಾಯತ್ ನ್ನು ಅಧಿಕಾರಿಗಳು ಮುಟ್ಟುತ್ತಾರೆ. ಇಷ್ಟು ದಿನ ಜನರು ತಹಶಿಲ್ದಾರ್ ಕಚೇರಿ, ಎಸಿ ಕಚೇರಿಗೆ ಪೆನ್ಷನ್, ಖಾತೆ, ಕಂದಾಯಕ್ಕಾಗಿ ತಮ್ಮ ಚಪ್ಪಲಿ ಸವೆಸಿದ್ದು ಸಾಕು, ಇನ್ಮುಂದೆ ಡಿಸಿಗಳು ಸವೆಸಲಿ'' ಎಂದು ಅವರು ಹೇಳಿದರು.
''ಈಗ ಅಧಿಕಾರಿಗಳು ಕೂಡ ಚಪ್ಪಲಿಯನ್ನು ಸವೆಸಿ ಹಳ್ಳಿ ಕಡೆ ಪ್ರಯಾಣ ಮಾಡಲಿ. ಅವರಿಗೂ ಹಳ್ಳಿಯ ಕಷ್ಟ-ಸುಖ ಗೊತ್ತಾಗಲಿ'' ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
''ಪ್ರಾಯೋಗಿಕವಾಗಿ ಈ ಯೋಜನೆ ಇದೇ ವಾರದಿಂದಲೇ ಉಡುಪಿಯಲ್ಲಿ ಟ್ರಯಲ್ ಆ್ಯಂಡ್ ಎರರ್ ವಿಧಾನದಲ್ಲಿ ಆರಂಭವಾಗಲಿ ಎಂದು ಸೂಚನೆ ನೀಡಿದ್ದೇನೆ'' ಎಂದರು.
''ಮಿನಿ ವಿಧಾನಸೌಧ ಕಾಮಗಾರಿ ಕೆಲಸ ಪಂಚವಾರ್ಷಿಕ ಯೋಜನೆ ಆಗಬಾರದು. ಒಂದು ವರ್ಷದೊಳಗೆ ಕಾಮಗಾರಿ ಮಾಡುವ ಭರವಸೆಯನ್ನು ಇಂಜಿನಿಯರ್ ಕೊಟ್ಟಿದ್ದಾರೆ. ರೂ. 10 ಕೋಟಿಯಲ್ಲಿ ಈಗಾಗಲೇ 3.33 ಕೋಟಿ ಬಿಡುಗಡೆಯಾಗಿದೆ. ಹೆಬ್ರಿ, ಬ್ರಹ್ಮಾವರ ಮತ್ತು ಬೈಂದೂರು ತಾಲ್ಲೂಕಿಗೂ ತಲಾ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ'' ಎಂದು ಹೇಳಿದರು.
''ವಿರೋಧ ಪಕ್ಷದವರು ಆಡಳಿತ ಪಕ್ಷವನ್ನು ಏನು ಮಾಡಿದ್ದಾರೆ ಎಂದು ಪದೇ ಪದೆ ಪ್ರಶ್ನೆ ಮಾಡುತ್ತಾರೆ. ಬಿಜೆಪಿ ಸರಕಾರ ಆಡಳಿತ ವಹಿಸಿ ಕೊಂಡ ಮೇಲೆ ಪ್ರಕೃತಿ ವಿಕೋಪ, ಅತಿವೃಷ್ಟಿ ಕೋವಿಡ್ ಹೀಗೆ ಒಂದಿಲ್ಲೊಂದು ಕಂಟಕ ಎದುರಾಗ್ತಿದೆ. ಆದರೂ ಅದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಉಡುಪಿಗೆ ರೂ 17.93 ಕೋಟಿ ಆಸ್ತಿ-ಪಾಸ್ತಿ ಹಾನಿಗೆ ಬಿಡುಗಡೆ ಯಾಗಿದೆ. 265 ರೈತರಿಗೆ 7.06 ಲಕ್ಷ ರೂಪಾಯಿ ರೈತರಿಗೆ ಇನ್ಪುಟ್ ಸಬ್ಸಿಡಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ರೂ.4 ಕೋಟಿ ಹಣವನ್ನು ಅತಿವೃಷ್ಟಿಯಿಂದ ನೀರು ನುಗ್ಗಿ ಹಾನಿಯಾದ ಮನೆಗಳಿಗೆ ಬಿಡುಗಡೆ ಮಾಡಿದ್ದೇವೆ'' ಎಂದರು.
''ಇನ್ಮುಂದೆ ವೃದ್ಧಾಪ್ಯ ವೇತನಕ್ಕೆ ಆ ಮಹಿಳೆಯ ವರ್ಷ ಹಾಗೂ ಆದಾಯ ಪ್ರಮಾಣ ಪತ್ರ ಕೇಳಕೂಡದು. ಬ್ಯಾಂಕ್ ಪಾಸ್ ಪುಸ್ತಕ ಇದ್ದರೆ ಸಾಕು. ಎಲ್ಲಾ ಡಾಟಾ ಗಳು ನಮ್ಮಲ್ಲೇ ಇವೆ. ಅರ್ಹ ಪಲಾನುಭವಿಗಳನ್ನು ಆಯಾ ಗ್ರಾಮ ಲೆಕ್ಕಾಧಿಕಾರಿ ಗುರುತಿಸಿ, ಅಲ್ಲೇ ಪತ್ರ ವನ್ನು ಕೊಡುವ ವ್ಯವಸ್ಥೆ ಸರ್ಕಾರ, ಇಲಾಖೆ ಮಾಡುತ್ತಿದೆ. ಇದೇ ಜನವರಿ 27 ರಂದು ಮುಖ್ಯಮಂತ್ರಿ ಗಳು ಉದ್ಘಾಟನೆ ಮಾಡಲಿದ್ದಾರೆ''
ಅಷ್ಟೇ ಅಲ್ಲದೆ ಕಂದಾಯ ಭೂಮಿ ಪರಿವರ್ತನೆ ಸಮಸ್ಯೆ ಇಡೀ ರಾಜ್ಯದಲ್ಲಿದೆ. ಅದನ್ನು ಬಗೆಹರಿಸುವ ಮತ್ತು ಕಾನೂನನ್ನು ಸರಳಿಕರಿಸಿ, ನಿಗದಿತ ಸಮಯದಲ್ಲಿ ಭೂಮಿ ಪರಿವರ್ತನೆ ಪತ್ರ ಸಿಗಬೇಕು. ಎಲ್ಲವನ್ನೂ ಒಂದೇ ವ್ಯವಸ್ಥೆಯಡಿ ಆದಷ್ಟು ಬೇಗ ತರುವ ಚಿಂತನೆ ನಡೆಸಿದ್ದೇವೆ'' ಆರ್ ಅಶೋಕ್ ತಿಳಿಸಿದರು.
''ಉಳುವ ರೈತನಿಗೆ ಆ ಭೂಮಿಯ ಒಡೆತನದ ಹಕ್ಕು ಕೊಡುವ ಬಗ್ಗೆ ಯೂ ಚಿಂತನೆ ನಡೆದಿದೆ. ಸರಕಾರದ ಜಾಗ ಮತ್ತು ಜನರ ನಡುವಿನ ಕಾನೂನು ಹೋರಾಟ ವನ್ನು ನಿಲ್ಲಿಸಿ ಬದಲಾವಣೆ ತರಬೇಕಿದೆ. ಆ ನಿಟ್ಟಿನಲ್ಲಿ ಕಂದಾಯ ಇಲಾಖೆ ಕೆಲಸ ಮಾಡುತ್ತಿದೆ. ಈಗಾಗಲೇ 30 ಜಿಲ್ಲೆಯ ಪ್ರವಾಸ ಮುಗಿಸಿ ಪರಿಶೀಲನೆ ನಡೆಸಿದ್ದೇನೆ. ಕಂದಾಯ ಇಲಾಖೆ ಜನಸ್ನೇಹಿಯಾಗಬೇಕು ಎಂಬುದು ನಮ್ಮ ಉದ್ದೇಶ. ಉಡುಪಿ ಕಳೆದ 14 ತಿಂಗಳಲ್ಲಿ ರಾಜ್ಯದಲ್ಲಿ ಅಗ್ರಸ್ಥಾನ ಕಾಯ್ದು ಕೊಂಡು ಬಂದಿದೆ. ಅದೇ ರೀತಿ ಮುಂದುವರಿಯಲಿ'' ಎಂದು ಆಶಯ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಕಾಪು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಪ್ರಭಾ, ಕಾಪು ಪುರಸಭೆ ಅಧ್ಯಕ್ಷರಾದ ಅನಿಲ್ ಕುಮಾರ್, ಕಾಪು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಧಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಸುವರ್ಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ ಮತ್ತು ಜಿಲ್ಲಾಧಿಕಾರಿಗಳಾದ ಜಿ ಜಗದೀಶ್, ಸಹಾಯಕ ಆಯುಕ್ತರಾದ ರಾಜು ಕೆ, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್ ಉಪಸ್ಥಿತರಿದ್ದರು.