ಬೆಂಗಳೂರು, ಜು06: ನಾವು ಮಂಡಿಸಿರುವುದು ಸಮಗ್ರ ದೃಷ್ಟಿಕೋನದ ಬಜೆಟ್. ಇದು ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಇದರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರಿಕೆಗೆ ಎಲ್ಲಿ ನಾನು ಅನ್ಯಾಯ ಮಾಡಿದ್ದೇನೆ. ಕೇವಲ ಮೀನುಗಾರರಿಗೆ 282 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದೇವೆ. ಉತ್ತರ ಕನ್ನಡ ಜಿಲ್ಲೆಗೆ 75 ಕೋಟಿ ರೂ. ಇಟ್ಟಿದ್ದೇವೆ. ಮಾತ್ರವಲ್ಲ, ಈ ಹಿಂದೆ ಮಂಗಳೂರು ಬಂದರಿಗೆ 50 ಕೋಟಿರೂ. ಇಟ್ಟಿದ್ದರು. ಅದೆಲ್ಲವನ್ನು ಹಾಗೆಯೇ ಮುಂದುವರೆಸಿದ್ದೇನೆ ಎಂದು ಹೇಳಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವವರಿಗೆ ಬಜೆಟ್ ವಿವರಣೆಯನ್ನು ಸರಿಯಾಗಿ ಓದಲು ಸಮಯ ಇಲ್ಲ. ಅವರಿಗೆ ಕನ್ನಡ ಅರ್ಥವಾಗಲಿಲ್ಲ. ಅದಕ್ಕೆ ನಾನೇನು ಮಾಡಲಿ. ನಮ್ಮದು 3-4 ಜಿಲ್ಲೆಯ ಬಜೆಟ್ ಅಲ್ಲ. ಸಮಗ್ರ ಕರ್ನಾಟಕ ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಿ. ನಾನು ಉತ್ತರ ಕೊಡುತ್ತೇನೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
2018-19ರ ಬಜೆಟ್ಗೆ ಸಿದ್ದರಾಮಯ್ಯನವರು ಫೆಬ್ರವರಿ ತಿಂಗಳಿನಲ್ಲಿ ಯಾವ ರೀತಿಯಲ್ಲಿ ಹಣವನ್ನು ಆಯವ್ಯಯದಲ್ಲಿ ಕೊಟ್ಟಿದ್ದಾರೆ. ಅದನ್ನೇ ನಾವು ಮುಂದುವರೆಸಿದ್ದೇವೆ. ಅದು ಯಾವುದನ್ನು ನಾವು ತೆಗೆದಿಲ್ಲ. ಎಲ್ಲವೂ ಹಾಗೆ ಮುಂದುವರಿದಿದೆ. ಅಲ್ಪ ಸಂಖ್ಯಾತರಿಗೂ ಸಿದ್ದರಾಮಯ್ಯ ಬಜೆಟ್ನಲ್ಲಿ ಏನು ಕೊಟ್ಟಿದ್ದಾರೆ, ಅದೆಲ್ಲವನ್ನೂ ಮುಂದುವರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.