ಬೆಂಗಳೂರು, ಜು06: ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ ಬಜೆಟಿನಲ್ಲಿ ಕರಾವಳಿಯನ್ನು ಕಡೆಗಣಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕರಾವಳಿಯ ಬಿಜೆಪಿ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರುಗಡೆ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಿರುವ ಪ್ರಸಂಗ ನಡೆದಿದೆ.
ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಕರಾವಳಿ ಭಾಗಕ್ಕೆ ಯಾವುದೇ ಯೋಜನೆಗಳನ್ನು ಘೋಷಣೆ ಮಾಡದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಇದೀಗ ನೂತನ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಭಿವೃದ್ಧಿಗೆ ಪ್ರಸಕ್ತ ಬಜೆಟ್ನಲ್ಲಿ ಯಾವುದೇ ಯೋಜನೆ ಘೊಷಣೆ ಮಾಡಿಲ್ಲ. ಆದರೆ ಬೇರೆ ಜಿಲ್ಲೆಗಳಿಗೆ ಭರಪೂರ ಕೊಡುಗೆ ಘೋಷಿಸಿ ಸಿಎಂ ತಾರತಮ್ಯದ ಪ್ರದರ್ಶನ ಮಾಡಿದ್ದಾರೆ. ರಾಜಕೀಯ ದ್ವೇಷಕ್ಕೆ ಕರಾವಳಿಯನ್ನು ಕಡೆಗಣಿಸಿ, ಈ ಭಾಗದ ಜನರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ಕರಾವಳಿಯ ಶಾಸಕರು ಆರೋಪಿಸಿದ್ದಾರೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಡೀ ರಾಜ್ಯಕ್ಕೆ ತಾಯಿಯ ಸ್ಥಾನದಲ್ಲಿ ನಿಲ್ಲಬೇಕಾದ ಸರ್ಕಾರ. ನಿನ್ನೆಯ ಬಜೆಟ್ನಲ್ಲಿ ಕರಾವಳಿ ಸೇರಿದಂತೆ ಆರೇಳು ಜಿಲ್ಲೆಗಳಿಗೆ ಮಲತಾಯಿ ಧೋರಣೆ ಮಾಡಿದೆ. ಕರಾವಳಿಯ ಜೀವನಾಡಿಯಾಗಿರುವ ಮೀನುಗಾರಿಕೆಗೆ ಅನುದಾನ ನೀಡಿಲ್ಲ. ಹಾಗಾಗಿ ಆ ಇಲಾಖೆ ಏಕೆ ಬೇಕು..? ಅದನ್ನು ರದ್ದುಪಡಿಸಲಿ. ಕರಾವಳಿ ಜಿಲ್ಲೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದರಿಂದ ಈಗಾಗಲೇ ನಿರ್ಧಾರ ಮಾಡಿರುವ ಹಲವು ಯೋಜನೆಗಳನ್ನು ಕೈಬಿಡುವ ಅನುಮಾನ ಕಾಡುತ್ತಿದೆ ಎಂದು ಹೇಳಿದರು.
ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿ, ಸಾಮಾನ್ಯ ಜನರು ಬಳಸುವ ವಿದ್ಯುತ್, ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದ್ದಾರೆ. ರಾಜ್ಯ ಸರ್ಕಾರದ ಬಜೆಟ್ ನೋಡಿದರೆ ಕೇವಲ ಜೆಡಿಎಸ್ ಶಾಸಕರು ಪ್ರತಿನಿಧಿಸುವ ಜಿಲ್ಲೆಗಳಿಗೆ ಮಾತ್ರ ಹೆಚ್ಚು ಅನುದಾನ, ಯೋಜನೆಗಳನ್ನು ಬಿಡುಗಡೆ ಮಾಡಿದಂತಿದೆ. ಹೀಗಾಗಿ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ವಿಧಾನಮಂಡಲದ ಎರಡೂ ಸದನಗಳಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
ಶಾಸಕ ಸುನಿಲ್ ಕುಮಾರ್ ಕಾರ್ಕಳ ಮಾತನಾಡಿ, ರಾಜ್ಯ ಸರಕಾರ ಮಲೆನಾಡು ಭಾಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕಳೆದ ಚುನಾವಣೆಯಲ್ಲಿ ಈ ಭಾಗದ ಜನರು ಮತ ನೀಡಲಿಲ್ಲ ಎಂಬ ಕಾರಣಕ್ಕೆ ಸೇಡು ತೀರಿಸಿಕೊಂಡಿದೆ. ಕರಾವಳಿ ಜಿಲ್ಲೆಯ ನದಿಗಳ ನೀರು ಇಂದು ಸಮುದ್ರ ಸೇರುತ್ತಿವೆ. ಅವುಗಳ ಹರಿಯುವಿಕೆಯ ದಿಕ್ಕನ್ನು ಬದಲಾಯಿಸಿ ಜಿಲ್ಲೆಗೆ ಸಾಕಷ್ಟು ನೀರೊದಗಿಸುವ ಕೆಲಸ ಆಗಬೇಕಿದೆ. ಇನ್ನೊಂದೆಡೆ ಕರಾವಳಿ ಜಿಲ್ಲೆಯ ದೇವಾಲಯಗಳ ಮೂಲಕ ಟೆಂಪಲ್ ಟೂರಿಸಂ ಪರಿಕಲ್ಪನೆಯನ್ನು ಸರ್ಕಾರ ವೃದ್ಧಿಸಬಹುದು. ಈ ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಬಹುದಾಗಿತ್ತು. ಆದರೆ ಈ ಬಗ್ಗೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಕರಾವಳಿ ಜಿಲ್ಲೆಗೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ಹಲವು ಸಂಪನ್ಮೂಲ ಮತ್ತು ಪವಿತ್ರ ಕ್ಷೇತ್ರಗಳನ್ನು ಒಳಗೊಂಡು ರಾಜ್ಯಕ್ಕೆ ಆದಾಯ ತರುವ ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಬಿಜೆಪಿ ಶಾಸಕರು ಆರೋಪ ಮಾಡಿದರು.