ಉಡುಪಿ, ಜ.26 (DaijiworldNews/PY): "ಜಿಲ್ಲಾ ಆಸ್ಪತ್ರೆ ಚಿಕಿತ್ಸೆಗಾಗಿ ಬರುವ ಒಳ ರೋಗಿಗಳು ಹಾಗೂ ಹೊರ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರೊಂದಿಗೆ ಅವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು" ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಕೋಟ ಶ್ರೀನಿವಾಸ ಪೂಜಾರಿ ಅವರು ವೆನ್ಲಾಕ್ ಆಸ್ಪತ್ರೆಯ ಅಧಿಕಾರಿಗಳಿಗೆ ಹಾಗೂ ವೈದ್ಯರಿಗೆ ಸೂಚನೆ ನೀಡಿದರು.

ಅವರು ಮಂಗಳವಾರ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಲ್ಲಿನ ರೋಗಿಗಳ ಸಮಸ್ಯೆಯನ್ನು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
"ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರು ಸೇರಿದಂತೆ ಹೊರ ಜಿಲ್ಲೆಯವರು ಚಿಕಿತ್ಸೆಗೆ ಬರುತ್ತಾರೆ. ಅವರೊಂದಿಗೆ ಇಲ್ಲಿನ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಸೇವಾ ಮನೋಭಾವವನ್ನು ಹೊಂದಿ, ಅವರಿಗೆ ಚಿಕಿತ್ಸೆ ನೀಡಬೇಕು" ಎಂದು ಸೂಚನೆ ನೀಡಿದರು.
"ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಮುಂದಿನ ದಿನದಲ್ಲಿ ಈ ರೀತಿಯ ದೂರುಗಳು ಬರದಂತೆ ಕಾರ್ಯ ನಿರ್ವಹಿಸಬೇಕು" ಎಂದು ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಆದೇಶಿಸಿದರು.
"ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿ ಸಾಮಾಗ್ರಿ ಸೇರಿದಂತೆ ಚಿಕಿತ್ಸಾ ಪರಿಕರಗಳನ್ನು ಆಗಿಂದಾಗ್ಗೆ ಟೆಂಡರ್ ಕರೆದು ದಾಸ್ತಾನುಗಳು ಇರುವಂತೆ ಎಚ್ಚರ ವಹಿಸಬೇಕು" ಎಂದರು.
"ಇಲ್ಲಿನ ಕೆಲವು ವೈದ್ಯರುಗಳು ಚಿಕಿತ್ಸೆಗೆ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗೆ ಹೋಗಲು ತಿಳಿಸುತ್ತಾರೆ ಎಂಬ ಸುದ್ದಿಯು ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಕಂಡು ಬಂದಲ್ಲಿ ಅಂತಹ ವೈದ್ಯರುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದರು.
"ಆಸ್ಪತ್ರೆಗೆ ಬರುವ ರೋಗಿಗಳನ್ನು ಪರೀಕ್ಷಿಸಿ ಔಷಧಿ ಮತ್ತು ಮಾತ್ರೆಗಳನ್ನು ಖಾಸಗಿ ಮೆಡಿಕಲ್ ಸೆಂಟರ್ನಲ್ಲಿ ಕೊಂಡುಕೊಳ್ಳಲು ಚೀಟಿ ಬರೆಯುತ್ತಾರೆ ಎಂಬ ಬಗ್ಗೆ ಕೇಳಿಬರುತ್ತಿದೆ. ಇದಕ್ಕೆ ಆಸ್ಪದ ನೀಡದೆ ಇಲ್ಲಿಯೇ ಉಚಿತವಾಗಿ ಔಷಧಿ ಮತ್ತು ಮಾತ್ರೆಗಳನ್ನು ವಿತರಿಸಲು ಮುಂದಾಗಬೇಕು" ಎಂದು ತಿಳಿಸಿದರು.
ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆಸ್ಪತ್ರೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ತಿಳಿಸಿದರು.
ಆಸ್ಪತ್ರೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು, ವೈದ್ಯೇತರ ಸಿಬ್ಬಂದಿಗಳು ಕೋವಿಡ್ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಬೇಕು ಹಾಗೂ ಆಸ್ಪತ್ರೆಯ ಆವರಣದಲ್ಲಿ ಸೂಚನಾ ಫಲಕದಲ್ಲಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭ, ಅಲ್ಲಿನ ಆಸ್ಪತ್ರೆಯ ಒಳ ರೋಗಿಗಳು ಹಾಗೂ ಹೊರ ರೋಗಿಗಳನ್ನು ಆಲಿಸಿ ಮಾತನಾಡಿ, "ಮುಂದಿನ ದಿನಗಳಲ್ಲಿ ಇಲ್ಲಿಗೆ ಬರುವ ರೋಗಿಗಳಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ" ಎಂದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಭರತ್ ಶೆಟ್ಟಿ ವೈ, ವೇದವ್ಯಾಸ ಕಾಮತ್, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧಿಕ್ಷಕ ಸದಾಶಿವ ಶಾನುಭೋಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ರಾಮಚಂದ್ರ ಬಾಯಾರಿ ಹಾಗೂ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.