ಕಾರ್ಕಳ, ಜ.26 (DaijiworldNews/PY): "ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾದ ಅಟ್ಟಹಾಸಕ್ಕೆ ಲಕ್ಷಾಂತರ ಮಂದಿ ಜೀವತೆತ್ತಿದ್ದಾರೆ. ದೇವರ ದಯೆ ಹಾಗೂ ಕರುಣೆಯಿಂದ ಬದುಕಿ ಉಳಿದ ನಾವು ಪರರ ಜೀವವನ್ನು ಒಳಿತಿಗಾಗಿ ಮುಡಿಪಾಗಿಡಬೇಕು" ಎಂದು ಬೆಳ್ತಂಗಡಿಯ ಧರ್ಮಾಧ್ಯಕ್ಷ ಪರಮಪೂಜ್ಯ ಲಾರೆನ್ಸ್ ಮುಕ್ಕುಝಿ ಹೇಳಿದರು.






ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದಲ್ಲಿ ಪ್ರಮುಖ ಪೂಜೆಯನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಒಂಬತ್ತನೇ ದಿನವಾದ ಮಂಗಳವಾರದಂದು ಐದು ಪೂಜೆಗಳು ಭಕ್ತಾದಿಗಳ ಉಪಸ್ಥಿತಿಯಲ್ಲಿ ಸುಸೂತ್ರವಾಗಿ ನಡೆದವು. ಭಕ್ತರು ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ವೀಕ್ಷಿಸಿ ಆಶೀರ್ವಚನವನ್ನು ಪಡೆದರು. ಅಸ್ವಸ್ಥರಿಗಾಗಿ ಹಾಗೂ ವೃದ್ಧರಿಗಾಗಿ ಪ್ರಾರ್ಥಿಸಲಾಯಿತು. ಗಣರಾಜ್ಯೋತ್ಸವ ಆಚರಣೆಯ ಪ್ರಯುಕ್ತ, ಬಲಿಪೂಜೆಗಳಲ್ಲಿ ಭಾರತ ರಾಷ್ಟ್ರಕ್ಕಾಗಿ ಹಾಗೂ ಸಕಲ ಪ್ರಜೆಗಳಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಕಥೋಲಿಕ್ ಸಭಾ ಹಾಗೂ ಮಹಿಳಾ ಸಂಘಟನೆಯ ಸದಸ್ಯರು ಸ್ವಯಂಸೇವಕರಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು.
ಬೆಳಗ್ಗೆ 10 ಗಂಟೆಗೆ ದಿನದ ಪ್ರಮುಖ ಬಲಿಪೂಜೆಯನ್ನು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಝಿಯವರು ನೆರವೇರಿಸಿ ಪ್ರಬೋಧನೆಯನ್ನು ನೀಡಿದರು. ಇತರ ಬಲಿಪೂಜೆಗಳನ್ನು ಬ್ರಹ್ಮಾವರದ ಕಪುಚಿನ್ ಗುರು ಫಾದರ್ ಜೊಕಿಮ್ ಡಿ’ಸೋಜಾ, ಸಂತೆಕಟ್ಟೆಯ ಸಹಾಯಕ ಗುರು ಫಾದರ್ ಸ್ಟೀವನ್ ಫೆರ್ನಾಂಡಿಸ್, ಶಂಕರಪುರದ ಸಹಾಯಕ ಗುರು ಫಾದರ್ ರೋಶನ್ ಡಿ’ಕುನ್ಹ ಹಾಗೂ ಜೆಪ್ಪು ಧರ್ಮಕೇಂದ್ರದ ಮುಖ್ಯಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ನೆರವೇರಿಸಿದರು.
ಬುಧವಾರ ಮಹೋತ್ಸವದ ಹತ್ತನೇ ದಿನದ ಕಾರ್ಯಕ್ರಮಗಳು: ಬೆಳಗ್ಗೆ 10 ಗಂಟೆಗೆ ಸಂಭ್ರಮದ ಹಬ್ಬದ ಬಲಿಪೂಜೆ - ಉಡುಪಿಯ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಲೋಬೊ ಅವರು ನೆರವೇರಿಸಲಿದ್ದಾರೆ. ಉಳಿದಂತೆ ಬೆಳಗ್ಗೆ 8, 12 ಹಾಗೂ ಮಧ್ಯಾಹ್ನ 3 ಮತ್ತು ಸಂಜೆ 5 ಗಂಟೆಯ ಬಲಿಪೂಜೆಗಳು ಎಂದಿನಂತೆ ನೆರವೇರಲಿವೆ.