ಉಡುಪಿ, ಜ.27 (DaijiworldNews/MB) : ರೈತ ವಿರೋಧಿ ಕ್ರಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ಸುಮಾರು 1 ಲಕ್ಷ ಟ್ರಾಕ್ಟರ್ ಮತ್ತು 1 ಕೋಟಿ 20 ಲಕ್ಷ ರೈತರು ನಡೆಸುತ್ತಿರುವ ಐತಿಹಾಸಿಕ ಮಹಾ ಟ್ರಾಕ್ಟರ್ ರ್ಯಾಲಿ ಯನ್ನು ಬೆಂಬಲಿಸಿ ಮಂಗಳವಾರ ದಂದು, ಜನವರಿ 26 ರಂದು ಉಡುಪಿಯ ಎಲ್ಲಾ ಪ್ರಗತಿಪರ ಸಂಘಟನೆಗಳು ಒಡಗೂಡಿ ನಡೆಸುವ ಕಾಲ್ನಡಿಗೆ ಜಾಥ ನಡೆಯಿತು.







ಕಾಲ್ನಡಿಗೆ ಜಾತಾವು ಉಡುಪಿಯ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕದಲ್ಲಿ ಸಮಾಪನಗೊಂಡಿತು. ಈ ಸಂದರ್ಭದಲ್ಲಿ, ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ )ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ್ ಮಾಸ್ತರ್ ಮಾತನಾಡಿ, 'ರೈತ ವಿರೋಧಿ ಕಾಯ್ದೆ ಯಾದ ಮೂರು ಮುಖ್ಯ ಕೃಷಿ ಸುಧಾರಣಾ ಕಾಯ್ದೆ ಯನ್ನು ಹಿಂಪಡೆಯಬೇಕು. ಕೇಂದ್ರ ಸರಕಾರ ಹಠಕ್ಕೆ ಬಿದ್ದು ಕಾಯ್ದೆ ಜಾರಿಯಾಗಲು ಪಣತೊಟ್ಟಿದೆ. ಚಳುವಳಿ ಜನರ ಹಕ್ಕು, ಇದು ಕೇವಲ ಸಾಂಕೇತಿಕ ಪ್ರತಿಭಟನೆ ಅಷ್ಟೇ, ಅಗತ್ಯವಿದ್ದರೆ ಬಲಿಷ್ಠ ಹೋರಾಟ ನಡೆಸುತ್ತೇವೆ ಎಂದರು.
ರೈತ ಸಮಿತಿಯ ಜಿಲ್ಲಾ ಸಂಚಾಲಕರಾದ ಶಶಿದರ್ ಮಾತನಾಡಿ, 'ಕೃಷಿ ಕಾಯ್ದೆ ಅನುಷ್ಠಾನ ವಾದರೆ ಇನ್ನೈದು ವರ್ಷದಲ್ಲಿ ಕಾರ್ಪೊರೇಟ್ ಕಂಪನಿಗಳು ರೈತರ ಭೂಮಿಯನ್ನು ಕಬಳಿಸುತ್ತವೆ. ಕಾರ್ಮಿಕ ಮತ್ತು ರೈತ ವರ್ಗದವರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಈಗ ಅದೇ ಸ್ವಾತಂತ್ರ್ಯ ವನ್ನು ಕೇಂದ್ರ ಸರಕಾರ ಕಸಿಯಲು ಹೊರಟಿದೆ. ರೈತರು ಮತ್ತು ಕಾರ್ಮಿಕ ವರ್ಗವನ್ನು ಎದುರು ಹಾಕಿಕೊಂಡರೆ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿಲಿಯಮ್ ಮಾರ್ಟಿಸ್ ಮತ್ತು ಪ್ರಗತಿಪರ ಚಿಂತಕರಾದ ಫಣಿರಾಜ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್, ದಲಿತ ಸಂಘರ್ಷ ಸಮಿತಿ, ಉಡುಪಿ ಜಿಲ್ಲೆ ಮುಸ್ಲಿಂ ಒಕ್ಕೂಟ, ರೈತಪರ ಸಂಘಟನೆಗಳು ಭಾಗವಹಿಸಿದ್ದವು.
ವಿವಿಧ ಸಂಘಟನೆಗಳ ನಾಯಕರುಗಳಾದ ರಮೇಶ್ ಕಾಂಚನ್, ಶ್ಯಾಮ್ ರಾಜ್ ಬಿರ್ತಿ, ಪ್ರಶಾಂತ್ ಜತ್ತನ್ನ, ರೈತ ಸಮಿತಿಯ ಶಶಿಧರ್ ಹೆಗ್ಡೆ, ಕೃಷ್ಣಮೂರ್ತಿ ಆಚಾರ್ಯ, ವಿಶ್ವಾಸ್ ಅಮೀನ್, ವಿಲಿಯಂ ಮಾರ್ಟಿಸ್, ಸಿಪಿಐಎಮ್ ನ ಜಿಲ್ಲಾ ಕಾರ್ಯದರ್ಶಿ ಬಾಲ ಕೃಷ್ಣ ಶೆಟ್ಟಿ, ಗಣೇಶ್ ನೆರ್ಗಿ, ಸುನೀತಾ ಶೆಟ್ಟಿ, ಮುಸ್ಲಿಂ ಒಕ್ಕೂಟದ ಅದ್ಯಕ್ಷರು ಯಾಸೀನ್ ಮಲ್ಪೆ, ಹುಸೇನ್ ಕೋಡಿಬೆಂಗ್ರೆ, ಸಲಾವುದ್ದೀನ್, ಮೊದಲಾದವರು ಭಾಗವಹಿಸಿದ್ದರು.