ಉಡುಪಿ, ಜ.27 (DaijiworldNews/MB) : ಮಲ್ಪೆಯ ಪಡುಕೆರೆಯಲ್ಲಿ ಮರೀನಾ ಬೀಚ್ ಆಗಲು ಬಿಡುವುದಿಲ್ಲ ಎಂದು ಮೀನುಗಾರರು ಮತ್ತು ಸ್ಥಳೀಯರು ಒಕ್ಕೊರಲಿನಿಂದ ಮಂಗಳವಾರ ಉಡುಪಿ ಶಾಸಕ ರಘುಪತಿ ಭಟ್ ಅವರ ಜೊತೆ ನಡೆದ ಮುಖಾಮುಖಿ ಚರ್ಚೆಯಲ್ಲಿ ವಿರೋಧಿಸಿದರು.







ಇತ್ತೀಚೆಗೆ ಪಡುಕೆರೆಯಲ್ಲಿ ಮರೀನಾ ಬೀಚ್ ಆಗದಂತೆ ಮೀನುಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂದು ನಡೆದ ಚರ್ಚೆಯಲ್ಲಿ ಶಾಸಕರ ಮನವೊಲಿಸುವ ಪ್ರಯತ್ನ ಕೂಡ ವಿಫಲವಾಯಿತು. ಚರ್ಚೆಯ ನೇತೃತ್ವ ವಹಿಸಿದ್ದ ಪ್ರಕಾಶ್ ಮಲ್ಪೆಯವರು ಒಂಭತ್ತು ಅಂಶಗಳಿರುವ ನಿರ್ಣಯವನ್ನು ಸಭೆಯಲ್ಲಿ ಮಂಡಿಸಿದರು.
ತದನಂತರ ಮಾತನಾಡಿದ ಶಾಸಕ ರಘುಪತಿ ಭಟ್, "ಪಡುಕೆರೆ ಯಲ್ಲಿ ಮರೀನಾ ಬೀಚ್ ಮಾಡುವುದು ಕೇವಲ ಪ್ರಸ್ತಾವನೆ ಮಾತ್ರ. ಯಾವ ನಿರ್ದಾರವೂ ಆಗಿಲ್ಲ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೂಲಕ ಸಿಡಬ್ಲ್ಯುಪಿಆರ್ ಎಸ್ ನಿಂದ ಒಂದು ಕೋಟಿ ವೆಚ್ಚದಲ್ಲಿ ಅಧ್ಯಯನ ಮಾಡಿ ಸಾಧಕ-ಬಾಧಕಗಳ ಬಗ್ಗೆ ವರದಿ ಸಿದ್ದ ಮಾಡಲು ಮಾತುಕತೆ ನಡೆಸಿದ್ದೇವೆ. ಈ ವರದಿ ಸಿದ್ದವಾಗಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಮೆರೈನ್ ಟೆಕ್ ಸಂಸ್ಥೆ ಯಿಂದ ಈ ಯೋಜನೆ ಮಾಡಲು ಇಯರ್ ಮಾರ್ಕ್ ಮಾಡಿದೆ. ಪಡುಕೆರೆಯ ಶಾಂತಿನಗರದ ವಾಸಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು" ಎಂದು ಭರವಸೆ ನೀಡಿದರು.
ಅಲ್ಲದೆ "ಮರೀನಾ ಬೀಚ್ ಆದರೂ ಅಲ್ಲಿ ಪಬ್, ಕ್ಲಬ್, ಹೋಟೆಲ್ಗಳು ಆಗಲು ಅವಕಾಶ ಕೊಡುವುದಿಲ್ಲ. ಶೋರೂಮ್ಸ್ , ಮನೋರಂಜನಾ ಔಟ್ ಲೆಟ್ ಗಳು ಬರಬಹುದು. ಮೀನುಗಾರಿಕೆಗೆ ಸಮಸ್ಯೆ ಯಾಗುವ, ಸಂಸ್ಕೃತಿಗೆ ದಕ್ಕೆಯಾಗುವ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಒಂದು ಬಾರಿ ತಜ್ಞರ ವರದಿ ಬಂದರೆ, ಇಲ್ಲಿಗೆ ಅವರನ್ನು ಕರೆತಂದು ಮುಖಾಮುಖಿ ಚರ್ಚೆ ಮಾಡಲು ಸೂಚಿಸುತ್ತೇನೆ. ಮೀನುಗಾರಿಕಾ ಆಂತರಿಕ ಸಮಸ್ಯೆ ಬಗ್ಗೆ ಸ್ಪಷ್ಟವಾದ ಅರಿವಿಲ್ಲ. ಆಂತರಿಕ ಮತ್ತು ಅಂತಾರಾಷ್ಟ್ರೀಯ ಬೋಟ್ ನಿಲುಗಡೆ ವ್ಯವಸ್ಥೆ ಬೇರೆಯೇ ಇದೆ. ಅವೆಲ್ಲವನ್ನೂ ವರದಿ ಬಂದ ಮೇಲೆಯೇ ಕೂಲಂಕಷವಾಗಿ ಅಧ್ಯಯನ ಮಾಡಿದ ಮೇಲೆ ನಿರ್ಧಾರ ಮಾಡಲಾಗುತ್ತದೆ" ಎಂದು ಶಾಸಕ ಭಟ್ ಸ್ಪಷ್ಟಪಡಿಸಿದರು.
ಗ್ರಾಮದ ಹಿರಿಯರಾದ ರಾಮ ಕಾಂಚನ್ ಮಾತನಾಡಿ, "ಮರೀನಾ ಬೀಚ್ ಆದರೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎಂಬ ಅರಿವು ನಮಗಿದೆ. ಅದಕ್ಕೆ ತಜ್ಞರ ವರದಿಯ ಅಗತ್ಯವಿಲ್ಲ. ಮರೀನಾ ಆದರೆ ಅಳಿವೆ ಬಾಗಿಲಿನಲ್ಲಿ ಸಮಸ್ಯೆ ಎದುರಾಗುತ್ತದೆ. ತೂಫಾನ್ಗಳು ಬಂದಾಗ ಆಶ್ರಯ ನೀಡುವ ದ್ವೀಪಗಳಲ್ಲಿ ನಿರ್ಬಂಧ ಪ್ರಾರಂಭವಾಗುತ್ತದೆ. ಮಾಡುವುದಾದರೆ ಸಾಮಾನ್ಯ ಬೀಚ್ ನಿರ್ಮಾಣ ಮಾಡಿ. ಪ್ರವಾಸಿಗರು ಬಂದು ಪ್ರಕೃತಿ ಸೌಂದರ್ಯ ಸವಿಯಲಿ. ಪ್ರಕೃತಿ ದತ್ತವಾದ ಸಂಪತ್ತು ಹಾಗೆ ಉಳಿಯಲಿ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಭುವನ್ ಕೋಟ್ಯಾನ್ ಮಾತನಾಡಿ, "ನಮಗೆಲ್ಲರಿಗೂ ನಮ್ಮ ಹಿರಿಯರೇ ತಜ್ಞರು, ವೈಜ್ಞಾನಿಕ ವರದಿಯ ಅಗತ್ಯವಿಲ್ಲ" ಎಂದು ಸ್ಪಷ್ಟ ಪಡಿಸಿದರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಮ್ಮ ಅಭಿಪ್ರಾಯ ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಪ್ರಕಾಶ್ ಮಲ್ಪೆ, "ಕಳೆದ ಬಾರಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಂತೆ ಈ ಯೋಜನೆಯ ದೃಷ್ಟಿಯಿಂದ ಸರ್ವೆ ಮುಂತಾದ ಯಾವುದೇ ಕೆಲಸಕ್ಕೂ ನಾವು ಅನುಮತಿ ಕೊಡಲ್ಲ. ತಜ್ಞರ ವರದಿ ಸಕಾರಾತ್ಮಕ ವಾಗಿ ಬಂದರೂ ಅಥವಾ ಬಾರದಿದ್ದರೂ ಯೋಜನೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ನಡೆಸಲು ಬಿಡುವುದಿಲ್ಲ. ಒಂದು ವೇಳೆ ನಡೆದರೆ ಮುಂದೆ ಆಗುವ ಪ್ರತಿಕ್ರಿಯೆಗೆ ನಾವು ಜವಾಬ್ದಾರರಲ್ಲ. ಅಭಿವೃದ್ಧಿಯ ಹೆಸರಲ್ಲಿ ಒಂದು ಊರು ಬಲಿಯಾಗುವುದನ್ನು ನೋಡಲಾರೆವು. ಸಿಡಬ್ಲ್ಯುಪಿಆರ್ ಎಸ್ ಗೆ ಕೊಡುವ ಒಂದು ಕೋಟಿ ರೂಪಾಯಿ ಹಣವನ್ನು ಒಳ್ಳೆಯ ವಿಚಾರಕ್ಕೆ ಬಳಸಿ. ಅದು ಜನರು ಕಷ್ಟ ಪಟ್ಟು ತೆರಿಗೆ ಕಟ್ಟಿದ ಹಣ. ವ್ಯರ್ಥ ಆಗಬಾರದು ಎಂದರು. ಊರಿನ ಅಭಿವೃದ್ಧಿ ಊರಿನ ಜನರೇ ನಿರ್ಧಾರ ಮಾಡಬೇಕು, ಬೇರೆಯವರಲ್ಲ. ಊರಿನವರು ನಿರ್ಧಾರ ಮಾಡಿದಂತೆ, ಮಲ್ಪೆಗೆ ಬರುವ ಮುಖ್ಯ ಎರಡು ಪ್ರವೇಶದಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇನ್ನು ಯಾರೇ ಆಗಲಿ ಯೋಜನೆಯ ಸರ್ವೆಗೆ ಬಂದರೆ ಮುಂದಾಗುವ ಪ್ರತಿಕ್ರಿಯೆ ಗೆ ನಾವು ಜವಾಬ್ದಾರಿ ಅಲ್ಲ ಅಂತ ಬರೆದ ಬೋರ್ಡ್ ಅಳವಡಿಸುತ್ತೇವೆ. ಏನೇ ಆಗಲಿ ಇಲ್ಲಿ ಮರೀನಾ ಬೀಚ್ ಆಗದಂತೆ ತಡೆಯಲು ನಾವೆಲ್ಲರೂ ಶತ ಸಿದ್ದರಾಗಿದ್ದೇವೆ" ಎಂದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ನ ಅಧ್ಯಕ್ಷ ದಿನಕರ್ ಬಾಬು, ತಾಲೂಕು ಪಂಚಾಯತ್ ನ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಪಂಡರಿನಾಥ್ ಭಜನಾ ಮಂದಿರದ ಗೌರವಾಧ್ಯಕ್ಷರಾದ ಶಿವರಾಜ್ ಪುತ್ರನ್ ಉಪಸ್ಥಿತರಿದ್ದರು.