ಉಡುಪಿ, ಜ.27 (DaijiworldNews/PY): ಜ.26ರ ಮಂಗಳವಾರದಂದು ನಗರದಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮೂರುವರೆ ವರ್ಷದ ಪುಟಾಣಿ ಸೇನಾ ಸಮವಸ್ತ್ರ ಧರಿಸಿ, ಕೈಯಲ್ಲಿ ಮೆಷಿನ್ ಗನ್ ಹಿಡಿದುಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ.




ಉಡುಪಿ ಜಿಲ್ಲಾಡಳಿತದ ವತಿಯಿಂದ ಜ.26ರ ಮಂಗಳವಾರದಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮೀನುಗಾರಿಕಾ ಸಚಿವ ಎಸ್. ಅಂಗಾರ ಉಡುಪಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಗೌರವ ವಂದನೆಯನ್ನು ಸ್ವೀಕರಿಸಿದರು. ಈ ವೇಳೆ ಇಡೀ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವಂತೆ ಆ ಪುಟಾಣಿ ಸುತ್ತಲೂ ಹೋಗುತ್ತಿದ್ದಳು.
ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆದ ಪುಟಾಣಿ ಮಯೂರಿ ಪ್ರಭು. ಮಯೂರಿಯ ತಂದೆ ರಾಘವೇಂದ್ರ ಪ್ರಭು ಉಡುಪಿಯ ಅಂಚೆ ಕಚೇರಿಯಲ್ಲಿ ಪೋಸ್ಟ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶ್ರೀದೇವಿ ಗೃಹಿಣಿ. ಮಹಿಳಾ ಪೊಲೀಸ್ ಆಗಬೇಕು ಎಂಬುದು ಮಯೂರಿಯ ಇಚ್ಛೆ. ಅದಕ್ಕಾಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಾಗ ಆಕೆಯ ಪೋಷಕರು ಅವಳಿಗೆ ಸೇನಾ ಸಮವಸ್ತ್ರವನ್ನು ಹಾಕುತ್ತಾರೆ. ಹಾಗಾಗಿ ಗಣರಾಜ್ಯೋತ್ಸವಕ್ಕಾಗಿ ಮಯೂರಿಯ ಪೋಷಕರು ಆಕೆಗೆ ಸೇನಾ ಸಮವಸ್ತ್ರ ನೀಡಿದ್ದಾರೆ.
ಮಯೂರಿ ಸಚಿವ ಎಸ್. ಅಂಗಾರ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾಳೆ. ಬಳಿಕ ಇಬ್ಬರೂ ಪುಟಾಣಿಗೆ ಶುಭ ಹಾರೈಸಿದ್ದಾರೆ.