ಮಂಗಳೂರು, ಜ.27 (DaijiworldNews/PY): ಇಲ್ಲಿಗೆ ಸಮೀಪವಿರುವ ಗುರುಪುರದ ಸುತ್ತಮುತ್ತ ಹರಿಯುವ ಫಲ್ಗುಣಿ ನದಿಯ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಕೆಲವು ಕಡೆ ಮೀನುಗಳು ಸತ್ತಿವೆ. ಇದಲ್ಲದೇ ಉಳಾಯಿಬೆಟ್ಟು, ಸೇತುವೆ ಬಳಿ, ಕಾರಮೊಗರು, ಏತಮೊಗರು ಮುಂತಾದ ಪ್ರದೇಶಗಳಲ್ಲಿ ನದಿ ತಟದ ಬಾವಿಗಳ ನೀರು ಕಲುಷಿತಗೊಂಡಿದೆ.

ಜ.23ರ ಶನಿವಾರದಂದು ಗೋಳಿದಡಿಗುತ್ತಿನ ಶ್ರೀ ಮಹಾಕಾಲೇಶ್ವರ ದೇವರ ಉಜ್ಜೈನಿ ತೀರ್ಥಬಾವಿಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿತ್ತು. ಇದು ಮಳವೂರು ಡ್ಯಾಂ ಕಡೆಯ ಕಾರ್ಖಾನೆಗಳಿಂದ ಹರಿದು ಬರುವ ರಾಸಾಯನಿಕಯುಕ್ತ ನೀರಾಗಿರಬೇಕು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಗುರುಪುರ, ಕಂದಾವರ, ಗಂಜಿಮಠ ಹಾಗೂ ಪಡುಪೆರಾರ ಗ್ರಾಮ ಪಂಚಾಯತ್ಗಳಿಗೆ ಫಲ್ಗುಣಿ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಪಂಚಾಯತ್ ವ್ಯಾಪ್ತಿಗೆ ನದಿ ನೀರು ಶುದ್ದೀಕರಣಗೊಂಡ ನಂತರ ಪೂರೈಕೆಯಾಗುತ್ತದೆ ಎಂದು ಪಂಚಾಯತ್ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಹೇಳುತ್ತಿದ್ದರೂ ಕೂಡಾ ಶುದ್ಧೀಕರಣ ಘಟಕ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನದಿಗೆ ನೀರು ನೇರವಾಗಿ ಸರಬರಾಜಾಗುತ್ತಿದೆ. ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
"ಈ ವಿಷಯವನ್ನು ತಹಶೀಲ್ದಾರ್, ಗುರುಪುರ ನಾಡಕಚೇರಿ, ಉಪ ತಹಶೀಲ್ದಾರ್ ಮತ್ತು ಗುರುಪುರ ಪಿಡಿಒಗೆ ದೂರವಾಣಿ ಮೂಲಕ ತಿಳಿಸಿದ್ದೇನೆ. ಕೆಲವು ಗ್ರಾ.ಪಂ.ಗಳು ಕುಡಿಯುವ ನೀರು ಯೋಜನೆಯಡಿ ಸ್ಥಳೀಯವಾಗಿ ಈ ನದಿ ನೀರು ಪಡೆಯುತ್ತಿವೆ. ಪರಿಸ್ಥಿತಿ ಹೀಗಾದರೆ ಜನರಿಗೆ ಕುಡಿಯಲು ಹೇಗೆ ನೀರು ಸಿಗುತ್ತದೆ?" ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಕೇಳಿದ್ದಾರೆ.
ಸೇತುವೆಯ ಮೇಲೆ ವಾಹನದಲ್ಲಿ ಹೋಗುವವರು, ದಾರಿಹೋಕರು ನದಿಗೆ ಪೂಜಾ ಸಾಮಾಗ್ರಿಗಳನ್ನು ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಾರೆ. ಈ ಕಾರಣದಿಂದ ಸೇತುವೆಯ ಕಂಬಗಳ ಕೆಳಗೆ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿದೆ. ಇದಲ್ಲದೆ, ತ್ಯಾಜ್ಯವೂ ನದಿಯ ಮೇಲ್ಮೈಯಲ್ಲಿ ಹರಿಯುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತ, ಪೊಲೀಸ್ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಸ್ಥಳೀಯರು ನೀಡಿದ ದೂರಿನ ಪ್ರಕಾರ, ಉಪ ತಹಶೀಲ್ದಾರ್ ಶಿವಪ್ರಸಾದ್ ಮತ್ತು ಕಂದಾಯ ನಿರೀಕ್ಷಕ ನವನೀತ ಮಾಳವ ಅವರು ಜನವರಿ 25 ರ ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದರು.
ಈ ಹಿಂದೆ ಪಿಲಿಕುಳ ನಿಸರ್ಗಧಾಮದ ಬಳಕೆಗೆ ಹರಿದು ಬರುತ್ತಿದ್ದ ಮಂಗಳೂರು ನಗರಪಾಲಿಕೆಯ ವ್ಯಾಪ್ತಿಯ ತ್ಯಾಜ್ಯ ನೀರು ಈಗ ಪಚ್ಚನಾಡಿಯಿಂದ ಮಂಜಲ್ಪಾದೆಯಾಗಿ ಫಲ್ಗುಣಿಗೆ ಹರಿದು ಬರುತ್ತಿದೆ. ಶುದ್ಧೀಕರಣಗೊಳ್ಳದ ನೀರನ್ನು ಪಿಲಿಕುಳ ನಿಸರ್ಗಧಾಮ ಆಡಳಿತವು ನಿರಾಕರಿಸಿದ ನಂತರ ಮಂಜಲ್ಪಾದೆಯಿಂದ ನೇರವಾಗಿ ಫಲ್ಗುಣಿ ನದಿಗೆ ಹರಿಯುತ್ತಿದೆ. ಈ ಬಗ್ಗೆ ಈ ಹಿಂದೆ ಮೂಡುಶೆಡ್ಡೆಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.
ಉಪ ತಹಶೀಲ್ದಾರ್ ಶಿವಪ್ರಸಾದ್ ಮಾತನಾಡಿ, "ಈಗ ನದಿ ತಟ ಹೊರತುಪಡಿಸಿ ಉಳಿದೆಲ್ಲಾ ಭಾಗಗಳಲ್ಲಿ ನೀರು ತಿಳಿಯಾಗಿದೆ. ಸ್ಥಳೀಯ ತೀರ್ಥ ಬಾವಿಯ ನೀರು ಕಲುಷಿತಗೊಂಡಿದೆ. ಈ ಬಗ್ಗೆ ನಾನು ತಹಶೀಲ್ದಾರ್ಗೆ ವರದಿ ನೀಡುತ್ತೇನೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕು" ಎಂದು ಹೇಳಿದ್ದಾರೆ.