ಬ್ರಹ್ಮಾವರ, ಜ.27 (DaijiworldNews/MB) : ಮೋಟಾರುಬೈಕಿನಲ್ಲಿ ಆಗಮಿಸಿದ ಮೂವರು ಯುವಕರು ಜನವರಿ 26 ರ ಮಂಗಳವಾರ ತಾಲ್ಲೂಕಿನ ಶಿರಿಯಾರ ಗುಡ್ಡಟ್ಟು ಎಂಬಲ್ಲಿರುವ ಕೆಲವು ಮನೆಗಳಲ್ಲಿ ಕಳ್ಳತನ ಮಾಡುವ ಯತ್ನ ಮಾಡಿದ್ದಾರೆ. ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು ಓರ್ವ ಪರಾರಿಯಾಗಿದ್ದಾನೆ.

ಸುರೇಶ್ ಮತ್ತು ರಾಕೇಶ್ ಪೊಲೀಸರ ವಶಕ್ಕೆ ಒಪ್ಪಿಸಲಾದ ಇಬ್ಬರು ಆರೋಪಿಗಳಾಗಿದ್ದು, ನಂದೀಶ್ ಅಲಿಯಾಸ್ ವಿಶ್ವ ಪರಾರಿಯಾದ ಆರೋಪಿ.
ಒಂಟಿಯಾಗಿರುವ ಮಹಿಳೆಯರ ಮನೆಯಿಂದ ವಸ್ತುಗಳನ್ನು ಕದಿಯಲು ಮೂವರು ಹೊಂಚು ಹಾಕುತ್ತಿದ್ದರು ಎಂದು ಹೇಳಲಾಗಿದೆ. ಸ್ಥಳೀಯರು ಅವರನ್ನು ಹಿಡಿಯಲು ಪ್ರಯತ್ನಿಸಿದಾಗ, ಅವರು ಚಾಕುವನ್ನು ಬೀಸಿ ಪರಾರಿಯಾಗಿದ್ದರು. ನಂತರ, ಸ್ಥಳೀಯರು ಇಬ್ಬರನ್ನು ಗ್ರಾಮದ ಸಮೀಪದಿಂದ ಹಿಡಿದಿದ್ದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇನ್ನು ಪರಾರಿಯಾದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮಕ್ಕಳ ಅಪಹರಣ ಕಾರ್ಯದಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ ಎಂಬ ವದಂತಿಗಳಿದ್ದರೂ ಪೊಲೀಸರು ವದಂತಿಗಳನ್ನು ನಿರಾಕರಿಸಿದ್ದಾರೆ. ಈ ಗ್ಯಾಂಗ್ ಚಂದ್ರ ಶಿರಿಯಾರ ಎಂಬವರ ಆರು ವರ್ಷದ ಮಗನನ್ನು ಅಪಹರಿಸಲು ಪ್ರಯತ್ನಿಸಿದ್ದು ಅದನ್ನು ಗಮನಿಸಿದ ಜನರು ಬಾಲಕನಿಗೆ ಸಹಾಯ ಮಾಡಲು ಧಾವಿಸಿದರು. ಈ ಸಮಯದಲ್ಲಿ, ಅವರು ಬಾಲಕನನ್ನು ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡರು ಎಂದು ಹೇಳಲಾಗಿದೆ. ಜನರು ಅವರನ್ನು ಆಟೋದಲ್ಲಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು.
ತನಿಖೆಯ ಬಳಿಕವೇ ನಿಜಾಂಶ ಹೊರಬೀಳಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಈವರೆಗೂ ಯಾರೂ ಕೂಡಾ ಪೊಲೀಸರಿಗೆ ದೂರು ನೀಡಿಲ್ಲ. ಆದ್ದರಿಂದ ಬಂಧಿತರನ್ನು ಮಂಗಳೂರಿನ ಉರ್ವಾ ಪೊಲೀಸರಿಗೆ ಒಪ್ಪಿಸಲು ಪೊಲೀಸರು ಮುಂದಾಗಿದ್ದಾರೆ.
ಈ ಮೂವರು ಬಳಸಿದ ಮೋಟಾರುಬೈಕನ್ನು ಮಂಗಳೂರಿನ ಉರ್ವಾಸ್ಟೋರ್ನಿಂದ ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಓರ್ವ ಬೆಂಗಳೂರಿನವನಾಗಿದ್ದು, ಇನ್ನೋರ್ವ ಸ್ಥಳೀಯನಾಗಿದ್ದಾನೆ.