ಮಂಗಳೂರು, ಜು07: ಕರ್ನಾಟಕದ ಕರಾವಳಿಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪುತ್ತೂರಿನಲ್ಲಿ ಇಬ್ಬರು ಮಹಾಮಳಗೆ ಬಲಿಯಾಗಿದ್ದಾರೆ.
ಮಹಾ ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದು ಅಜ್ಜಿ ಮತ್ತು ಮೊಮ್ಮಗ ಮೃತಪಟ್ಟ ಘಟನೆ ಪುತ್ತೂರಿನ ಹೆಬ್ಬಾರಬೈಲಿನಲ್ಲಿ ನಡೆದಿದೆ. ಮಳೆಯಿಂದ ಹಸಿಯಾಗಿದ್ದ ಗೋಡೆ ಮನೆಯೊಳಗೆ ಮಲಗಿದ್ದ ಅಜ್ಜಿ ಮತ್ತು ಮೊಮ್ಮಗನ ಮೇಲೆ ಬಿದ್ದಿದೆ. ಪರಿಣಾಮ, ಪಾರ್ವತಿ (65) ಹಾಗೂ ಅವರ ಮೊಮ್ಮಗ ಧನುಷ್ (11) ಮೃತಪಟ್ಟಿದ್ದಾರೆ.
ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪುತ್ತೂರು ಸಹಾಯಕ ಕಮಿಷನರ್ ಎಚ್.ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲೆಗಳಿಗೆ ರಜೆ ಘೋಷಣೆ:
ಮಹಾ ಮಳೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ,ಬಂಟ್ವಾಳ, ಮೂಡಬಿದಿರೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮೂಡಬಿದಿರೆ, ಸುಳ್ಯ, ಬೆಳ್ತಂಗಡಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲೂ ಕೆಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.