ಕಾರ್ಕಳ, ಜ.28 (DaijiworldNews/MB) : ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ಹತ್ತನೇ ದಿನದ ಬಲಿಪೂಜೆಗಳು ಸಂಭ್ರಮದಿಂದ ಜರುಗಿದವು. ಪ್ರಮುಖ ಬಲಿಪೂಜೆಯನ್ನು ಉಡುಪಿಯ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಲೋಬೊರವರು ನೆತರವೇರಿಸಿದರು. ಈ ಸಂಧರ್ಭದಲ್ಲಿ ತಮ್ಮ ಪ್ರಬೋಧನೆಯಲ್ಲಿ ಪೋಪ್ ಫ್ರಾನ್ಸಿಸ್ರವರ ವಿಶ್ವಪತ್ರವನ್ನು ಉಲ್ಲೇಖಿಸಿ ಮಾತನಾಡಿದ ಅವರು "ನಾವು ಬಡವರಿಗೆ ಮಾಡಿದ ಒಳಿತಿನ ಪ್ರತಿಫಲವನ್ನು ದೇವರು ನಮಗೆ ನೂರ್ಮಡಿಯಾಗಿ ಹಿಂದಿರುಗಿಸುತ್ತಾರೆ. ನಮ್ಮ ಸಹೋದರ ಸಹೋದರಿಯರಿಗೆ ಒಳಿತನ್ನು ಮಾಡುವ ಯಾವುದೇ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು. ಈ ಲೋಕದ ಅಸಂಖ್ಯಾತ ಜನರು ನಮ್ಮ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ" ಎಂದರು.

















































ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಹತ್ತನೇ ದಿನವಾದ ಬುಧವಾರ ಭಕ್ತಾದಿಗಳ ಉಪಸ್ಥಿತಿಯಲ್ಲಿ ಬಲಿಪೂಜೆಗಳು ಸುಸೂತ್ರವಾಗಿ ನಡೆದವು. ಭಕ್ತರು ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ವೀಕ್ಷಿಸಿ ಆಶೀರ್ವಚನವನ್ನು ಪಡೆದರು. ಅಸ್ವಸ್ಥರಿಗಾಗಿ ಹಾಗೂ ವೃದ್ಧರಿಗಾಗಿ ಪ್ರಾರ್ಥಿಸಲಾಯಿತು.
ಹಬ್ಬದ ಸಂಭ್ರಮಿಕ ಬಲಿಪೂಜೆಯನ್ನು ಉಡುಪಿಯ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊರವರು ನೆರವೇರಿಸಿ ಪ್ರಬೋಧನೆಯನ್ನು ನೀಡಿದರು. ಬಸಿಲಿಕದ ಪ್ರಧಾನ ಗುರು ಫಾದರ್ ಜಾರ್ಜ್ ಡಿ'ಸೋಜಾ, ಸಹಾಯಕ ಗುರು ಫಾದರ್ ರೊಯ್ ಮೆಲ್ವಿಲ್ ಲೋಬೊ ಹಾಗೂ ಇತರ ಗುರುಗಳು ಧರ್ಮಾದ್ಯಕ್ಷರೊಡನೆ ಬಲಿಪೂಜೆಯಲ್ಲಿ ಪಾಲ್ಗೊಂಡರು. ದಿನದ ಇತರ ಬಲಿಪೂಜೆಗಳನ್ನು ಅಲಂಗಾರಿನ ಫಾದರ್ ವಾಲ್ಟರ್ ಡಿ'ಸೋಜಾ, ಉಡುಪಿ ಶೋಕಮಾತಾ ಚರ್ಚಿನ ಫಾದರ್ ಚಾರ್ಲ್ಸ್ ಮಿನೇಜಸ್, ಕಲ್ಯಾಣಪುರ ಮಿಲಾಗ್ರಿಸ್ನ ಫಾದರ್ ವಲೇರಿಯನ್ ಮೆಂಡೋನ್ಸ ಹಾಗೂ ದಿನದ ಏಕೈಕ ಕನ್ನಡ ಬಲಿಪೂಜೆಯನ್ನು ಬಿಜೈನ ಕಪುಚಿನ್ ಗುರು ಫಾದರ್ ಪಾವ್ಲ್ ಮೆಲ್ವಿನ್ ಡಿ'ಸೋಜಾರವರು ನೆರವೇರಿಸಿದರು.
ಗುರುವಾರ ಮಹೋತ್ಸವದ ಹನ್ನೊಂದನೇ ಹಾಗೂ ಅಂತಿಮ ದಿನವಾಗಿದ್ದು ಅಂದಿನ ಕಾರ್ಯಕ್ರಮಗಳು: ಬೆಳಗ್ಗೆ 10 ಗಂಟೆಗೆ ಸಂಭ್ರಮದ ಹಬ್ಬದ ಬಲಿಪೂಜೆ - ಮಂಗಳೂರಿನ ಧರ್ಮಾಧ್ಯಕ್ಷ ಪರಮಪೂಜ್ಯ ಪೀಟರ್ ಪಾವ್ಲ್ ಸಲ್ಡಾನಾರವರು ನೆರವೇರಿಸಲಿದ್ದಾರೆ. ಉಳಿದಂತೆ ಬೆಳಗ್ಗೆ 8, 12 ಹಾಗೂ ಮಧ್ಯಾಹ್ನ 3 ಮತ್ತು ಸಂಜೆ 5 ಗಂಟೆಯ ಬಲಿಪೂಜೆಗಳು ಎಂದಿನಂತೆ ನೆರವೇರಲಿರುವವು.