ಮಂಗಳೂರು, ಜ.28 (DaijiworldNews/PY): ಪ್ರಸ್ತುತ ಎಸ್ಸೆಸ್ಸೆಲ್ಸಿ ತರಗತಿಗಳು ಪೂರ್ಣಮಟ್ಟದಲ್ಲಿ ನಡೆಯುತ್ತಿದ್ದು, ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ.80 ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ಹಾಜರಾತಿಯನ್ನು ಇನ್ನಷ್ಟು ಸುಧಾರಿಸುವ ಪ್ರಯತ್ನಗಳು ಕೂಡಾ ಈಗ ನಡೆಯುತ್ತಿವೆ.

"ಕೊರೊನಾ ಹಿನ್ನೆಲೆ ದೀರ್ಘ ಕಾಲದ ರಜೆಯ ನಂತರ ರಾಜ್ಯದಲ್ಲಿ ಜ.1ರಂದು ಎಸ್ಸೆಸ್ಸೆಲ್ಸಿ ತರಗತಿಗಳು ಪುನರಾರಂಭಗೊಂಡವು. ಇಡೀ ರಾಜ್ಯದಲ್ಲಿ ಈ ಎರಡು ಜಿಲ್ಲೆಗಳಲ್ಲಿ ತರಗತಿಗಳು ಆರಂಭವಾದ ದಿನದಿಂದ ಹಾಜರಾತಿ ಉತ್ತಮವಾಗಿವೆ. ಹಾಜರಾತಿ ಕ್ರಮೇಣ ಸುಧಾರಿಸುತ್ತಿದೆ. ಶೀಘ್ರದಲ್ಲೇ ಶೇ.100ರಷ್ಟು ಹಾಜರಾತಿಯನ್ನು ತಲುಪುವ ಭರವಸೆ ಇದೆ" ಎಂದು ಶಿಕ್ಷಕರು ಹೇಳಿದ್ದಾರೆ.
ವಿದ್ಯಾರ್ಥಿಗಳು ಗೈರಾಗುತ್ತಿರುವುದಕ್ಕೆ ಕಾರಣ ಏನು ಎನ್ನುವುದನ್ನು ತಿಳಿಯುವ ನಿಟ್ಟಿನಲ್ಲಿ ಶಾಲಾಭಿವೃದ್ದಿ, ಮೇಲ್ವಿಚಾರಣಾ ಸಮಿತಿ ಹಾಗೂ ಶಿಕ್ಷಕರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
"ದ.ಕ ಜಿಲ್ಲೆಯಲ್ಲಿ ಸುಮಾರು 31,000 ವಿದ್ಯಾರ್ಥಿಗಳಲ್ಲಿ 24,500 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 15,673 ವಿದ್ಯಾರ್ಥಿಗಳಿದ್ದು, ಅವರಲ್ಲಿ 13,945 (84.66%) ವಿದ್ಯಾರ್ಥಿಗಳು ಬುಧವಾರ ತರಗತಿಗಳಿಗೆ ಹಾಜರಾಗಿದ್ದರು. 530 ಶಾಲೆಗಳಲ್ಲಿ 183 ಶಾಲೆಗಳಲ್ಲಿ ಗೈರಾಗುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಕೈಗೊಂಡ ಸಮೀಕ್ಷೆ ಪೂರ್ಣಗೊಂಡಿದೆ" ಎಂದು ದ.ಕ ವಿದ್ಯಾಂಗ ಉಪನಿರ್ದೇಶಕ ಮಲ್ಲೇಸ್ವಾಮಿ ಹೇಳಿದ್ದಾರೆ.
"ಹಾಸ್ಟೆಲ್ ಸಮಸ್ಯೆಗಳು, ಹೊರಜಿಲ್ಲೆಯ ಮಕ್ಕಳು ಹಾಗೂ ಜಿಲ್ಲೆಯಲ್ಲಿರುವ ಮಕ್ಕಳ ಸಹಿತ 3 ವಿಧಗಳಲ್ಲಿ ಸರ್ವೇ ಮಾಡಲಾಗುತ್ತಿದೆ" ಎಂದಿದ್ದಾರೆ.
"ಹಾಸ್ಟೆಲ್ಗಳು ತೆರೆದಿಲ್ಲ ಮತ್ತು ವಲಸೆ ಕಾರ್ಮಿಕರ ಮಕ್ಕಳು ಇನ್ನೂ ಕೂಡಾ ಜಿಲ್ಲೆಗೆ ಬಂದಿಲ್ಲ. ಶೀಘ್ರವೇ ಎಲ್ಲಾ ವಿದ್ಯಾರ್ಥಿಗಳು ಹಾಜರಾಗುವಂತ ನಿರೀಕ್ಷೆ ಇದೆ" ಎಂದು ವಿದ್ಯಾಂಗ ಉಪನಿದೇಶಕಿ ಎನ್.ಎಚ್.ನಾಗೂರ ಹೇಳಿದ್ದಾರೆ.