ಮಂಗಳೂರು, ಜು07: ನಗರದ ಹೆಮ್ಮೆಯ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆ ಕಳೆದ ಮೂರು ವರ್ಷಗಳಲ್ಲಿ ನೂರಾರು ಬಡ ಜನರಿಗೆ, ಅನಾರೋಗ್ಯ ಪೀಡಿತರಿಗೆ 85 ಲಕ್ಷಕ್ಕೂ ಮಿಕ್ಕಿ ಸಹಾಯಧನ ವಿತರಿಸಿದೆ ಎಂದರೆ ಸಾಮಾನ್ಯ ವಿಚಾರವಲ್ಲ. ನಿಜಕ್ಕೂ ಇದು ಶ್ಲಾಘನೀಯ. ಇಂತಹ ಸಂಘಟನೆ ಅವಿಭಜಿತ ಉಡುಪಿ ಸಹಿತ ರಾಜ್ಯದಾದ್ಯಂತ ಬೆಳೆಯಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಶಶಿಕಾಂತ ಬಂಗೇರ ಕುಟುಂಬಕ್ಕೆಸಂಘಟನೆ ವತಿಯಿಂದ ನೀಡಲಾದ 50 ಸಾವಿರ ರೂ. ಸಹಾಯಧನ ವಿತರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಅನೇಕ ಬಡ ಕುಟುಂಬಗಳು ನೆರವಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಲೇ ಇರುತ್ತದೆ. ಅದರಲ್ಲಿ ಕೆಲವರಿಗೆ ಮಾತ್ರ ಸರಕಾರ ಸಹಾಯ ಮಾಡುತ್ತದೆ. ಆದರೆ ಬಿರುವೆರ್ ಕುಡ್ಲದಂತಹ ಸಂಘಟನೆ ಜಾತಿ, ಧರ್ಮ ನೋಡದೆ ಅನೇಕ ಬಡ ಕುಟುಂಬಗಳಿಗೆ ಸಹಾಯಧನವನ್ನು ವಿತರಿಸಿ ಬದುಕಿಗೆ ಆಸರೆ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾಮಾಜಿಕ ಕಳಕಳಿಯನ್ನು ಪ್ರತಿ ಸಂಘಟನೆ ಹೊಂದಿದಾಗ ಜನರ ಕಷ್ಟಗಳಿಗೆ ಪರಸ್ಪರ ಸಹಾಯ ಹಸ್ತ ಚಾಚಲು ಸಾಧ್ಯ. ಈ ಮೂಲಕ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆ ಹೆಸರು ಅವಿಭಜಿತ ಉಡುಪಿ ಸಹಿತ ರಾಜ್ಯದಾದ್ಯಂತ ಪಸರಿಸಲಿ ಎಂದು ಸಂಘಟನೆಯನ್ನು ಶ್ಲಾಘಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡ ಸತೀಶ್ ಕುಂಪಲ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ಬಾಗ್, ಕುದ್ರೋಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸಾಯಿರಾಂ, ಬಿಜೆಪಿ ಮುಖಂಡರಾದ ವಸಂತ್ ಜೆ.ಪೂಜಾರಿ, ರವಿಶಂಕರ್ ಮಿಜಾರ್, ಮನಪಾ ಸದಸ್ಯ ರಾಜೇಂದ್ರ, ಬಿರುವೆರ್ ಕುಡ್ಲ ಸಂಘಟನೆಯ ಅಧ್ಯಕ್ಷ ರಾಕೇಶ್ ಬಳ್ಳಾಲ್ಬಾಗ್, ಮುಖಂಡರಾದ ರಣ್ದೀಪ್ ಕಾಂಚನ್, ಸದಾನಂದ ಪೂಜಾರಿ, ರೋಶನ್ ಬಾಳ್ಳಾಲ್ಬಾಗ್, ಲತೀಶ್ ಬಳ್ಳಾಲ್ಬಾಗ್, ಭರತ್ ಬಳ್ಳಾಲ್ಬಾಗ್, ಕಿಶೋರ್ ಬಾಬು, ರಾಕೇಶ್ ಚಿಲಿಂಬಿ, ರಾಮ್ ಪ್ರಸಾದ್ ಎಕ್ಕೂರು, ಲೋಹಿತ್ ಗಟ್ಟಿ, ದೀಪಕ್ ಕೋಡಿಕಲ್, ರಿನಿತ್ ರಾಜ್ ,ಪ್ರಾಣೇಶ್ ಬೋಳೂರು, ಯತಿರಾಜ್ ಬಳ್ಳಾಲ್ ಬಗ್, ಮಹೇಶ್ ಅಶೋಕ ನಗರ, ದಂಬೆಲ್ ನಿವಾಸಿಗಳ ಬಳಗ ಮತ್ತಿತರರು ಉಪಸ್ಥಿತರಿದ್ದರು.