ಪುತ್ತೂರು, ಜ.28 (DaijiworldNews/MB) : ತನ್ನನ್ನು ಅತೀ ಶ್ರೀಮಂತ ಗ್ರಾಹಕನಂತೆ ಬಿಂಬಿಸಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ, ನಕಲಿ ಚಿನ್ನಗಳನ್ನು ಸಂಸ್ಥೆಯಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಗಿರೀಶ್ ಕುಮಾರ್ (32) ತಾಲ್ಲೂಕಿನ ಬೇರಿಕೆ ಕಾಯಕ್ಕಾಡ್ ನಿವಾಸಿ.
ಎರಡು ದಿನಗಳ ಹಿಂದೆ, ಆತ ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಆಗಮಿಸಿದ್ದು ಉಪ್ಪಿನಂಗಡಿಯಲ್ಲಿನ ಕೆಲವು ಸಹಕಾರಿ ಬ್ಯಾಂಕುಗಳಿಗೆ ಭೇಟಿ ನೀಡಿದ್ದನು. ತಮ್ಮನ್ನು ಶ್ರೀಮಂತ ವ್ಯಕ್ತಿಯೆಂದು ಬಿಂಬಿಸಿಕೊಂಡ ಆತ ತಾನು ಅವಸರದಲ್ಲಿ ಇರುವ ನಾಟಕವಾಡಿ, ಚಿನ್ನಾಭರಣದ ಮೌಲ್ಯಮಾಪಕರು ಬರುವವರೆಗೂ ಕಾಯಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗೆ ಹೇಳಿ ತನ್ನಲ್ಲಿದ ನಕಲಿ ಚಿನ್ನಾಭರಣ ನೀಡಿ ಸಾಲವನ್ನು ಪಡೆದಿದ್ದಾನೆ.
ಉಪ್ಪಿನಂಗಡಿಯಲ್ಲಿರುವ ಮತ್ತೊಂದು ಸಹಕಾರಿ ಸಂಸ್ಥೆಗೆ ಆತ ಭೇಟಿ ನೀಡಿದ ಸಂದರ್ಭ ಸಿಬ್ಬಂದಿಯು ಈತನ ವಂಚನೆಯನ್ನು ಅರಿತು, ಆತನನ್ನು ಹಿಡಿಯುವ ಮೊದಲು ಆತ ಪರಾರಿಯಾಗಿದ್ದಾನೆ. ಈ ಬಗ್ಗೆ ಎರಡು ಸಹಕಾರಿ ಸಂಸ್ಥೆಗಳು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬಳಿಕ ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಈರಯ್ಯ ಡಿ ಎನ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಸ್ತುತ ಆತನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆತ ಇದೇ ಮಾದರಿಯಲ್ಲಿ ಇತರ ಅನೇಕ ಸಹಕಾರಿ ಸಂಸ್ಥೆಗಳಿಗೆ ಮೋಸ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.