ಮಂಗಳೂರು,ಸೆ.04: ಬಿಜೆಪಿ ಯುವ ಮೋರ್ಚಾ ಸೆ.೭ರಂದು ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯ ಮಂಗಳೂರು ಚಲೋಗೆ ನಗರ ಪೊಲೀಸ್ ಆಯುಕ್ತ ಅನುಮತಿ ನಿರಾಕರಿಸಿರುವುದರಿಂದ ಸಿಡಿಮಿಡಿಗೊಂಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ತಾಕತ್ತಿದ್ದರೆ ರಾಜ್ಯ ಸರ್ಕಾರ ಮಂಗಳೂರು ಚಲೋ ತಡೆಯಲಿ. ನಾವು ಬೈಕ್ ರ್ಯಾಲಿ ನಡೆಸಿಯೇ ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಿನ ಭೀತಿ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಬೈಕ್ ರ್ಯಾಲಿಯೊಂದಿಗಿನ ಮಂಗಳೂರು ಚಲೋ ಪೊಲೀಸ್ ಇಲಾಖೆಯ ಮೂಲಕ ತಡೆಯೊಡ್ಡುವ ಪ್ರಯತ್ನ ಮಾಡಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುವುದು ಹೊಸತೇನಲ್ಲ. ಅದು ನಾಗರಿಕನ ಹಕ್ಕಾಗಿದೆ. ಈಗಾಗಲೇ 20 ಸಾವಿರಕ್ಕೂ ಅಧಿಕ ಬೈಕ್ ಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಲಿವೆ. ಸರ್ಕಾರಕ್ಕೆ ತಾಕತ್ತಿದ್ದರೆ ರ್ಯಾಲಿಯನ್ನು ತಡೆಯಲಿ ಎಂದು ಸವಾಲು ಹಾಕಿದ್ದಾರೆ.