ಮಂಗಳೂರು, ಜು 08: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇಬ್ಬರ ಸಾವು, ಮನೆಗಳಿಗೆ ಹಾನಿ ಹಾಗೂ ನೆರೆ ಭೀತಿ ಹಿನ್ನಲೆಯಲ್ಲಿ ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು.ಟಿ ಖಾದರ್ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿ ಎಲ್ಲಾ ಅಧಿಕಾರಿಗಳು ಜಾಗೃತರಾಗಿದ್ದು ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಪ್ರಕೃತಿ ವಿಕೋಪ ಹಾನಿಗಳ ಪರಿಶೀಲನೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯಲ್ಲಿ ಜು.11 ರ ತನಕ ಪ್ರತಿದಿನ ಸರಾಸರಿ ಶೇ.160 ಕ್ಕಿಂತ ಹೆಚ್ಚುವರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ವರದಿ ಮಾಡಿರುವುದರಿಂದ ಎಲ್ಲಾ ರೀತಿಯಲ್ಲೂ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು. ಇನ್ನೊಂದೆಡೆ ನೇತ್ರಾವತಿ ನದಿ ನೀರಿನ ಅಪಾಯ ಮಟ್ಟ 31.5 ಆಗಿದ್ದು, ಶನಿವಾರ 27ಕ್ಕೆ ತಲುಪಿದೆ. ಒಂದು ವೇಳೆ ಮಳೆ ಮುಂದುವರಿದು ಅಪಾಯದ ಗಡಿ 31 ದಾಟಿದರೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಹಾಗೂ ಪಕ್ಕದ 70 ರಷ್ಟು ಮನೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ ಎಂದರು .
ಶುಕ್ರವಾರ 15 ಮನೆಗಳು ಸೇರಿದಂತೆ ಈ ಬಾರಿ ಮಳೆಯಿಂದ 929 ಮನೆಗಳಿಗೆ ಹಾನಿಯಾಗಿದೆ. ಹಿಂದೆ ಎಂಟು ಹಾಗು ಶುಕ್ರವಾರ ರಾತ್ರಿ ಎರಡು ಸೇರಿ ಒಟ್ಟು 10 ಸಾವು ಸಂಭವಿಸಿದೆ ಎಂದರು. ತುರ್ತು ಸಂದರ್ಭಕ್ಕಾಗಿ ಬಳಸಲು ಜಿಲ್ಲಾಧಿಕಾರಿ ಬಳಿ 6.92 ಕೋಟಿ ರೂ. ಮೊತ್ತವಿದೆ ಎಂದರು.
ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯ 30 ಮಂದಿಯ ಎರಡು ತಂಡ ಜು. 8 ರಂದು ಮಂಗಳೂರಿಗೆ ತಲುಪಲಿದೆ . ಒಂದು ತಂಡ ದಕ್ಷಿಣ ಕನ್ನಡ ಇನ್ನೊಂದು ತಂಡ ಉಡುಪಿಯಲ್ಲಿ ಪರಿಹಾರ ಕಾರ್ಯ ನಡೆಸಲಿವೆ.ಅವರಿಗೆ ಜಿಲ್ಲಾಡಳಿತ ಮಾರ್ಗದರ್ಶನ ನೀಡಲಿದೆ ಎಂದರು .