ಉಡುಪಿ, ಜ.29 (DaijiworldNews/PY): "ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಬಹುತೇಕ ಹೊರರಾಜ್ಯದ ಸಿಬ್ಬಂದಿಗಳೇ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸ್ಥಳೀಯರಿಗೆ ಸಿಬ್ಬಂದಿಯೊಂದಿಗಿನ ಭಾಷಾ ಸಮಸ್ಯೆಯಿಂದ, ಬ್ಯಾಂಕ್ನ ಕೆಲಸ ಕಾರ್ಯಗಳಲ್ಲಿ ತೊಂದರೆಯಾಗುತ್ತಿದ್ದು, ಬ್ಯಾಂಕ್ ಸೇವೆಗಳಲ್ಲಿ ಸ್ಥಳೀಯರಿಗೆ ನೆರವಾಗುವಂತೆ ಕನಿಷ್ಠ ಪ್ರಮಾಣದಲ್ಲಿಯಾದರೂ ಕರ್ನಾಟಕ ರಾಜ್ಯದ ಸಿಬ್ಬಂದಿಯನ್ನು ನೇಮಿಸಬೇಕು" ಎಂದು ಜಿಲ್ಲಾ ಪಂಚಾಯತ್ನಲ್ಲಿ ಗುರುವಾರ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

"ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನಿಷ್ಠ 2 ಸಿಬ್ಬಂದಿಯಾದರೂ ಕನ್ನಡದವರು ಇದ್ದಲ್ಲಿ ಸ್ಥಳೀಯರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಅನ್ಯರಾಜ್ಯದ ಸಿಬ್ಬಂದಿಯೊಂದಿಗಿನ ಭಾಷಾ ಸಮಸ್ಯೆಯಿಂದ, ಬ್ಯಾಂಕ್ಗಳಲ್ಲಿ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ" ಎಂದು ಸದಸ್ಯ ಬಾಬು ಶೆಟ್ಟಿ ತಿಳಿಸಿದರು.
"ಬ್ಯಾಂಕಿಂಗ್ ನೇಮಕಾತಿಯಲ್ಲಿ ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಂಧ್ರ ಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶದ ಸಿಬ್ಬಂದಿ ಆಯ್ಕೆಯಾಗುತ್ತಿದ್ದಾರೆ" ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ತಿಳಿಸಿದರು.