ಕುಂದಾಪುರ, ಜು 08 : ಜಾಗದ ತಕರಾರಿನ ಹಿನ್ನಲೆಯಲ್ಲಿ ಮೂರು ವರ್ಷಗಳ ಹಿಂದೆ ಸಂಬಂಧಿಕರ ಮದುವೆ ಮನೆಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಅಪರಾಧ ಸಾಬೀತಾಗಿದೆ. ಮೂರು ವರ್ಷಗಳ ವಿಚಾರಣೆಯ ಬಳಿಕ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಶನಿವಾರ ತೀರ್ಪು ಹೊರಬಿದ್ದಿದೆ. ಆರೋಪಿಗಳಾದ ತೆಗ್ಗರ್ಸೆ ನಿವಾಸಿಗಳಾದ ರಾಜೇಶ್ ಶೆಟ್ಟಿ ಯಾನೆ ರಾಜೇಂದ್ರ(35) ಹಾಗೂ ರಾಘವೇಂದ್ರ ಶೆಟ್ಟಿ ಎಂಬವರುಗಳಿಗೆ ಆರು ವರ್ಷಗಳ ಕಠಿಣ ಸಜೆ ಹಾಗೂ 60 ಸಾವಿರ ರೂಪಾಯಿ ದಂಡ ವಿಧಿಸಿದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ಮನೆಯ ಮಾಲಕ ಕುಶಲ ಶೆಟ್ಟಿಯವರಿಗೆ ೪೫ ಸಾವಿರ ರೂಪಾಯಿಗಳ ಪರಿಹಾರ ನೀಡುವಂತೆಯೂ ಆದೇಶಿಸಿ ಶನಿವಾರ ಬೆಳಿಗ್ಗೆ ತೀರ್ಪು ಪ್ರಕಟಿಸಿದ್ದಾರೆ.
22 ಏಪ್ರಿಲ್ 2015 ರಂದು ಬೈಂದೂರು ತಗ್ಗರ್ಸೆಯ ಅರಳಿಕಟ್ಟೆಯಲ್ಲಿನ ಕುಶಲ ಶೆಟ್ಟಿಯವರ ಮಗನ ಮದುವೆ ಸಮಾರಂಭವು ನಡೆಯುತ್ತಿದ್ದು, ಸ್ಥಳೀಯ ಮಹಿಳೆಯಾದ ಕಾವೇರಿ ಮೋಗವೀರರವರನ್ನು ಮನೆಯಲ್ಲಿ ಉಳಿಸಿ ಮನೆಯವರು ಎಲ್ಲಾ ಮದುವೆಗೆ ತೆರಳಿದ್ದರು. ಇದೇ ಸಂದರ್ಭ ಆರೋಪಿತರಾದ ತೆಗ್ಗರ್ಸೆ ನಿವಾಸಿಗಳಾದ ರಾಜೇಶ್ ಶೆಟ್ಟಿ ಯಾನೆ ರಾಜೇಂದ್ರ(35) ಹಾಗೂ ರಾಘವೇಂದ್ರ ಶೆಟ್ಟಿ ಎಂಬುವರು ಮನೆಗೆ ಬಂದು ಕಾವೇರಿ ಮೋಗವೀರರವರಿಗೆ ಬೆದರಿಕೆ ಹಾಕಿ, ಮನೆಯ ಬಾಗಿಲು ಒಡೆದು, ಸೊತ್ತುಗಳನ್ನು ಒಡೆದು ಹಾಕಿ ಜಖಂ ಮಾಡಿ, ನಂತರ ತನ್ನ ಬಳಿಯಿದ್ದ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿತ್ತು. ಮದುವೆ ಮನೆಗೆ ಹೊರಗೆ ಹಾಕಲಾಗಿದ್ದ ಚಪ್ಪರ ತೋರಣಗಳನ್ನು ಧ್ವಂಸ ಮಾಡಿದ್ದು, ಮದುವೆ ಮುಗಿಸಿ ಮನೆಗೆ ಹಿಂತಿರುವಾಗ ಘಟನೆ ಬೆಳಕಿಗೆ ಬಂದಿತ್ತು ಎಂದು ನ್ಯಾಯಾವಾದಿ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು. ಬೈಂದೂರು ಠಾಣೆಗೆ ದೂರು ನೀಡಿದ್ದು, ಅಂದಿನ ಬೈಂದೂರಿನ ಠಾಣಾಧಿಕಾರಿ ಸಂತೋಷ ಕಾಯ್ಕಿಣಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದರು.
ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಳಿಕ ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಆರೋಪಿತರಿಬ್ಬರಿಗೂ ಮನೆಗೆ ಬೆಂಕಿ ಹಾಕಿದ್ದಕ್ಕೆ ತಲಾ 50 ಸಾವಿರ ರೂಪಾಯಿಗಳ ದಂಡ, 5 ವರ್ಷಗಳ ಕಠಿಣ ಸಜೆ ಮನೆಯ ಸೊತ್ತುಗಳನ್ನು ಪುಡಿಗೈದು ನಾಶ ಮಾಡಿದ್ದಕ್ಕೆ ತಲಾ ಒಂದು ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂಪಾಯಿಗಳ ದಂಡ ಹಾಗೂ ಸಂತ್ರಸ್ಥ ಕುಶಲ ಶೆಟ್ಟಿಯವರಿಗೆ 45 ಸಾವಿರ ರೂಪಾಯಿಗಳನ್ನು ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.