ಮಂಗಳೂರು, ಜ.29 (DaijiworldNews/PY): "2020ರ ಡಿಸೆಂಬರ್ 12 ರಂದು ನಗರದ ನ್ಯೂ ಚಿತ್ರ ಜಂಕ್ಷನ್ ಬಳಿ ಕರ್ತವ್ಯ ನಿರತ ಬಂದರು ಪೊಲೀಸ್ ಠಾಣೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮೂವರು ಆರೋಪಿಗಳು ಕಾರ್ಖಾನಾ ಗ್ಯಾಂಗ್ಗೆ ಸಂಬಂಧಿಸಿದವರು" ಎಂದು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದ್ದಾರೆ.

ಜ.29ರ ಶುಕ್ರವಾರದಂದು ಮಾಧ್ಯಮಗಳೊಂದಿಗೆ ಮಾತನಡಿದ ಅವರು, "ಬಂಧಿತ ಆರೋಪಿಗಳನ್ನು ಬೋಳಾರ್ ನಿವಾಸಿ ಇಬ್ರಾಹಿಂ ಶಾಕಿರ್(19), ಸಜಿಪನಡು ನಿವಾಸಿ ಅಕ್ಬರ್ (30), ಕುದ್ರೋಳಿಯ ಮಹಮ್ಮದ್ ಹನೀಫ್ ಯಾನೆ ಕರ್ಚಿ ಹನೀಫ್ (32) ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 11 ಮಂದಿಯನ್ನು ಬಂಧಿಸಲಾಗಿದೆ. ಈ ಹಿಂದೆ ಬಂಧಿತರಾದವರು ಮಾಯಾ ಗ್ಯಾಂಗ್ ಎನ್ನುವ ಗುಂಪು ಕಟ್ಟಿಕೊಂಡಿದ್ದರು" ಎಂದು ತಿಳಿಸಿದ್ದಾರೆ.
"2019 ರ ಡಿಸೆಂಬರ್ನಲ್ಲಿ ನಗರದಲ್ಲಿ ನಡೆದ ಸಿಎಎ ವಿರೋಧಿ ಹಿಂಸಾಚಾರ, ಗೋಲಿಬಾರ್ಗೆ ಪ್ರತೀಕಾರ ತೀರಿಸುವ ನಿಟ್ಟಿನಲ್ಲಿ ಪೊಲೀಸರ ಮೇಲ ದಾಳಿ ನಡೆಸಿದ್ದಾರೆ. ಈ ಕೃತ್ಯವನ್ನು ನಡೆಸಲು ಮಾಯಾ ಗ್ಯಾಂಗ್ ಹಾಗೂ ಕಾರ್ಖಾನಾ ಗ್ಯಾಂಗ್ ಅನ್ನು ರಚಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಒಂದು ವೇಳೆ ಬಂಧನವಾದಲ್ಲಿ ಪೊಲೀಸರ ವಿಚಾರಣೆಯನ್ನು ಹೇಗೆ ಎದುರಿಸಬೇಕು. ಜೈಲಿನಲ್ಲಿ ಯಾವ ರೀತಿಯಾಗಿರಬೇಕು ಎನ್ನುವ ಬಗ್ಗೆ ಹೇಳಿಕೊಡಲಾಗಿದ್ದು, ಈ ಎರಡು ಗ್ಯಾಂಗ್ಗಳ ನಡುವೆ ಪರಸ್ಪರ ಹೊಂದಾಣಿಕೆ ಇದೆ" ಎಂದಿದ್ದಾರೆ.
"ಈ ರೀತಿಯಾದ ಅಪರಾಧಗಳನ್ನು ಮಾಡಲು ಗ್ಯಾಂಗ್ ಮಕ್ಕಳನ್ನು ಬಳಸುವ ಸಿನಿಮಾಗಳನ್ನು ನಾವು ನೋಡಿದ್ದೇವೆ. ಇಲ್ಲಿ ಅಪ್ರಾಪ್ತ ವಯಸ್ಸಿನವರನ್ನು ಈ ಕೃತ್ಯಕ್ಕೆ ಬಳಸಲಾಗಿದೆ. ಮಾತ್ರೆ ಹಾಗೂ ಗಾಂಜಾವನ್ನು ಸೇವಿಸಿ ಈ ಕೃತ್ಯದಲ್ಲಿ ಭಾಗಿಯಾಗುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ಮಾಹಿತಿಗಳನ್ನು ನಾವು ಪಡೆದುಕೊಂಡಿದ್ದೇವೆ ಹಾಗೂ ತನಿಖೆ ಮುಂದುವರೆದಿದೆ" ಎಂದು ಹೇಳಿದ್ದಾರೆ.
"ಪೊಲೀಸರು ತಮ್ಮ ವೈಯುಕ್ತಿಕ ಜೀವನವನ್ನು ಬದಿಗಿಟ್ಟು ಹಗಲು-ರಾತ್ರಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಹಬ್ಬಗಳ ಸಂದರ್ಭದಲ್ಲಿಯೂ ಕೂಡಾ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ. ಪೊಲೀಸರಿಂದಲೂ ನಡೆದ ತಪ್ಪುಗಳನ್ನು ನಾವು ಗಮನಿಸಿದ್ದೇವೆ. ಈ ರೀತಿಯಾದಲ್ಲಿ ಇಲಾಖೆ ಸೂಕ್ತವಾದ ಕ್ರಮ ಕೈಗೊಳ್ಳುತ್ತದೆ. ಸೇಡು ತೀರಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ. ನಾವು ಆರೋಪಿಗಳನ್ನು ಬಂಧಿಸುತ್ತೇವೆ. ಇಂತಹ ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.