ಉಡುಪಿ, ಜ.29 (DaijiworldNews/PY): ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಅನುಕರಣೀಯ (ಗಣನೀಯ) ಸೇವೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ, ಇತ್ತೀಚೆಗೆ ಕರ್ನಾಟಕ ಸರ್ಕಾರ ಮತ್ತು ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯಿಂದ ಮೆಚ್ಚುಗೆಯ ಪ್ರಮಾಣಪತ್ರ ಲಭಿಸಿದೆ.

ಈ ಪ್ರಮಾಣಪತ್ರವನ್ನು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರಿಗೆ ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕರ್ನಾಟಕ ಸರ್ಕಾರದ ಗೌರವಾನ್ವಿತ ಮೀನುಗಾರಿಕೆ, ಬಂದರು ಮತ್ತು ಒಳನಾಡಿನ ಸಾರಿಗೆ ಸಚಿವ ಅಂಗರಾ ಎಸ್ ಅವರು 2021 ಜನವರಿ 26 ರಂದು ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ಹಸ್ತಾಂತರಿಸಿದರು.
ಕಸ್ತೂರ್ಬಾ ಆಸ್ಪತ್ರೆಯನ್ನು ಭಾರತ ಸರ್ಕಾರವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಯೆಂದು 2019 ರಲ್ಲಿ ಪ್ರಶಂಸಿಸಿತ್ತು ಮತ್ತು ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ ನಡೆದ ಆಯುಷ್ಮಾನ್ ಭಾರತ್ನ ಪ್ರಥಮ ವಾರ್ಷಿಕೋತ್ಸವದ ಆಚರಣೆಗೆ ದೆಹಲಿಗೆ ಆಹ್ವಾನಿಸಿ ಗೌರವಿಸಿತ್ತು.
2018 ರಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಆಸ್ಪತ್ರೆಯಾದಾಗಿನಿಂದ, ಕಸ್ತೂರ್ಬಾ ಆಸ್ಪತ್ರೆಯು ಈ ಯೋಜನೆಯಡಿ ಸುಮಾರು 15,000 ರೋಗಿಗಳಿಗೆ ಚಿಕಿತ್ಸೆ ನೀಡಿದೆ ಮತ್ತು ಇದರಲ್ಲಿ 13,000ದಷ್ಟು ಜನರು ಬಿಪಿಎಲ್ ರೋಗಿಗಳಾಗಿದ್ದರು. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಆಸ್ಪತ್ರೆಯು ಆಯುಷ್ಮಾನ್ ಅಡಿಯಲ್ಲಿ 1043 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಅದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆ 400 ಕ್ಕೂ ಹೆಚ್ಚು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆದ ರೋಗಿಗಳ ಕೆಲವು ಪ್ರಮುಖ ವಿಭಾಗವಾರು ಸಂಖ್ಯೆ ಈ ಕೆಳಗಿನಂತಿದೆ:
3,000 ಹೃದಯ ರೋಗಿಗಳು, 555 ಹೃದಯ ಶಸ್ತ್ರಚಿಕಿತ್ಸೆಗಳು, 1,055 ನರ ಶಸ್ತ್ರಚಿಕಿತ್ಸೆಗಳು, 905 ಮೂಳೆ ಶಸ್ತ್ರಚಿಕಿತ್ಸೆಗಳು, 140 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಳು, 415 ನವಜಾತ ರೋಗಿಗಳು, 535 ಮಕ್ಕಳ ರೋಗಿಗಳು, 900 ಕ್ಯಾನ್ಸರ್ ರೋಗಿಗಳು 140 ಮಕ್ಕಳ ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ.