ಕಾರ್ಕಳ, ಜ.30 (DaijiworldNews/PY): ಕಾರ್ಕಳ ಹಿರ್ಗಾನದ ಶ್ರೀ ಕುಂದೇಶ್ವರ ಕ್ಷೇತ್ರದಿಂದ ನೀಡಲಾಗುವ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿಯನ್ನು ಸೌಕೂರು ಮೇಳದ ಭಾಗವತ ಡಾ.ರವಿಕುಮಾರ್ ಸೂರಾಲು ಅವರಿಗೆ ಪ್ರದಾನ ಮಾಡಲಾಯಿತು.




ಪಂಚ ಮೇಳಗಳ ಸಂಸ್ಥಾಪಕ ಕಿಶನ್ ಹೆಗ್ಡೆ ಮಾತನಾಡಿ, "ಯಕ್ಷಗಾನ ಉಳಿಸಿ ಬೆಳೆಸಲು ಎಲ್ಲರೂ ಬಯಲಾಟ ಆಡಿಸಬೇಕಾಗಿಲ್ಲ. ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಹತ್ತುಸಮಸ್ತರು ಒಟ್ಟಾಗಿ ಆಟ ಆಡಿಸುವ ಮೂಲಕ ಕಲಾವಿದರನ್ನು ಆದರಿಸಬಹುದು" ಎಂದರು.
"ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಅಂತಾರಾಷ್ಟ್ರೀಯ ಮನ್ನಣೆ ಇದೆ. ಆರಂಭದಲ್ಲಿ ಈ ಪ್ರಶಸ್ತಿ ಬಂದಾಗ ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿರದ ಕಾಲದಲ್ಲೂ ದೇಶ- ವಿದೇಶಗಳಿಂದ ಅಭಿನಂದನೆಗಳ ಮಹಾಪೂರವೇ ಬಂದಿತ್ತು" ಎಂದರು.
"ಯಕ್ಷಗಾನದಲ್ಲಿ ಡಾಕ್ಟರೇಟ್ ಮಾಡಿದ ಸರಳ, ಪ್ರತಿಭಾನ್ವಿತ ಭಾಗವತರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ" ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ. ರವಿ ಸೂರಾಲು ಮಾತನಾಡಿ, "ಕೊರೊನಾ ಸಂಕಷ್ಟಕಾಲದಲ್ಲಿ ಕಲಾವಿದರಿಗೆ ವೇತನ ನೀಡಿದ ಸಮರ್ಥ ಯಜಮಾನ ಕಿಶನ್ ಹೆಗ್ಡೆ. ಇಂಥ ಕಲಾಪೋಷಕರೇ ಯಕ್ಷಗಾನಕ್ಕೆ ಆಸರೆ" ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದನಾ ಭಾಷಣ ಮಾಡಿದರು. ಸೃಷ್ಟಿ ಕಲಾವಿದ್ಯಾಲಯದ ಸಂಸ್ಥಾಪಕ ಛಾಯಾಪತಿ ಕಂಚಿಬೈಲು, ಧರ್ಮದರ್ಶಿ ಕೃಷ್ಣರಾಜೇಂದ್ರ ಭಟ್, ವೇದಮೂರ್ತಿ ರವೀಂದ್ರ ಭಟ್, ಉದ್ಯಮಿ ಸಚ್ಚಿದಾನಂದ ಎಡಮಲೆ, ರಮಾನಂದ ತೆಂಡುಲ್ಕರ್ ಇದ್ದರು.
ಇದೇ ಸಂದರ್ಭ ಸೌಕೂರು ಮೇಳದವರಿಂದ ಪುಷ್ಪಚಂದನ ಯಕ್ಷಗಾನ ಬಯಲಾಟ ನಡೆಯಿತು.
ಉತ್ಸವ: ಶ್ರೀಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವ, ಅನ್ನಸಂತರ್ಪಣೆ, ರಂಗಪೂಜೆ, ಭೂತ ಬಲಿ, ನೇಮೋತ್ಸವ, ಸಂಪ್ರೋಕ್ಷಣೆ ನಡೆಯಿತು.