ಮಂಗಳೂರು, ಜು 08: ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಜಗಳವಾಡುತ್ತಿದ್ದು, ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದೊಂದೊಗೆ ಮಾತನಾಡಿದ ಅವರು, ಸರ್ಕಾರ ಕುರ್ಚಿಗಾಗಿ ಕಿತ್ತಾಡುತ್ತಿದ್ದು, ಮಂತ್ರಿಗಿರಿಗಾಗಿ ಹೋರಾಟಗಳೇ ನಡಿತಾ ಇದೆ. ಹೀಗಾಗಿ ಜನಾದೇಶವಿಲ್ಲದೆ ಬಿಜೆಪಿಯನ್ನು ದೂರವಿಡಬೇಕೆಂಬ ಏಕೈಕ ಉದ್ದೇಶದಿಂದ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದರು. ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕಿತ್ತಾಟದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿದ್ದು , ಅಧಿಕಾರಿಗಳ ಮೇಲೆ ಅಂಕುಶ ಇಲ್ಲದಾಗಿದೆ ಎಂದರು.
ಇನ್ನು ಮಳೆಗಾಲ ಪ್ರಾರಂಭವಾಗುವ ಮೊದಲೇ ಸರ್ಕಾರ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ಕರೆದು , ಪರಿಹಾರಕ್ಕಾಗಿಯೇ ಸುಮಾರು 5 ರಿಂದ 10 ಕೋಟಿ ರೂಪಾಯಿ ಮೀಸಲಿಡಬೇಕು . ಆದರೆ ಇದೆಲ್ಲ ಕೆಲಸ ಕಾರ್ಯಗಳನ್ನು ಈ ಸರ್ಕಾರ ಮಾಡಿಲ್ಲ. ಜನರ ಸಂಕಷ್ಟ ಬಗ್ಗೆ ತಲೆಗೆಡಿಸಿಕೊಂಡಿಲ್ಲ. ಜನ ಮುಳುಗಿ ಹೋದರೆ ನಮಗೇನು ಎನ್ನುವ ನಿರ್ಲಕ್ಷ ಧೋರಣೆ ತಳೆದಿದೆ, ಇಂತವರೂ ಕೆಲವೇ ದಿನಗಳಲ್ಲಿ ಮುಳುಗಿ ಹೋಗುತ್ತಾರೆ ಎಂದು ಟೀಕಿಸಿದರು.
ಮುಂದಿನ ಲೋಕಸಭೆ ಚುನಾವಣೆಯ ವಿಚಾರವಾಗಿ ಮಾತನಾಡಿದ ಅವರು ಪ್ರಧಾನಿ ಮೋದಿಯನ್ನು ಸೋಲಿಸಲು ತೃತೀಯ ರಂಗ ರಚನೆ ಮಾಡುವುದು ಕೇವಲ ಕನಸು. ತೃತೀಯ ರಂಗ ಹರಿದ ಬಟ್ಟೆಯಂತೆ, ಒಂದು ಕಡೆ ಹೊಲಿಗೆ ಹಾಕಿದರೆ ಮತ್ತೊಂದು ಕಡೆ ಹರಿಯುತ್ತಿದೆ. ಈಗ ಸಣ್ಣ ಸಣ್ಣ ತೂತುಗಳನ್ನು ಹೊಲಿಯಲಾಗಿದ್ದು ಇನ್ನೊಂದು ಕಡೆ ದೊಡ್ಡದಾಗಿ ಹರಿಯುತ್ತದೆ ಎಂದು ವ್ಯಂಗ್ಯವಾಡಿದರು .