ಕಾರ್ಕಳ, ಜ.30 (DaijiworldNews/PY): ಒಂಭತ್ತು ವರ್ಷದ ಬಾಲಕನೋರ್ವ ಕೋಣದ ಬಾಲ ಹಿಡಿದು ಓಡುವ ಮೂಲಕ ಕಂಬಳ ಓಟದ ಕಡೆ ಆಕರ್ಷಿತನಾಗಿದ್ದಾನೆ.

ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಂಜಲ್ಬೆಟ್ಟುವಿನ ಸುಹಾಸ್ ಪ್ರಭು ಹಾಗೂ ಅಮೃತ ದಂಪತಿಗಳ ಪುತ್ರ ಅತಿಶ್ ಪ್ರಭು (9) ಕಂಬಳದಲ್ಲಿ ಸಾಧನೆಮಾಡಬೇಕು ಎನ್ನುವ ಕನಸು ಕಂಡಿದ್ದಾನೆ.
ಅತಿಶ್ ಕಾರ್ಕಳದ ಎಸ್ವಿಟಿ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ. ಇತ್ತೀಚೆಗೆ ಕಂಬಳದ ಪ್ರಸಿದ್ದ ಓಟಗಾರ ಶ್ರೀನಿವಾಸ್ ಗೌಡ ಅವರ ಸಾಧನೆಯನ್ನು ನೋಡಿ ಈತನಿಗೆ ನಾನು ಅವರಂತೆ ಆಗಬೇಕು ಎನ್ನುವ ಕನಸು ಹೊತ್ತುಕೊಂಡಿದ್ದಾನೆ.
ಅತಿಶ್ನ ಮನೆಯಲ್ಲಿ ಮೂರು ಕೋಣಗಳಿದ್ದು, ಕೋಣಗಳನ್ನು ತೊಳೆಯಲು ಈತ ಕರೆದೊಯ್ಯುತ್ತಾನೆ. ಹಾಗೆ ಮನೆಗೆ ವಾಪಾಸ್ಸಾಗುವಾಗ ಅತಿಶ್ ಕೋಣಗಳ ಜೊತೆ ಓಡುವುದನ್ನು ರೂಢಿಸಿಕೊಂಡಿದ್ದಾನೆ. ಅಲ್ಲದೇ, ಆತ ಕಂಬಳ ಓಟಗಾರರಂತೆ ಉಡುಗೆಯನ್ನು ಧರಿಸುತ್ತಾನೆ. ಈತನ ಕಂಬಳ ಪ್ರೀತಿಗೆ ಹೆತ್ತವರೂ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.