ಉಡುಪಿ, ಜ.30 (DaijiworldNews/PY): ಉಡುಪಿ ನಗರಸಭೆಯ ವ್ಯಾಪ್ತಿಗೆ ಬರುವ ಯುಜಿಡಿ ಮತ್ತು ನಿಟ್ಟೂರಿನ ಎಸ್ಟಿಪಿಯ ವಿಳಂಬ ಕಾಮಗಾರಿಯ ಬಗ್ಗೆ ಅಧಿಕಾರಗಳ ವಿರುದ್ದ ಮಲ್ಪೆ, ಕಲ್ಮಾಡಿ, ವಡಂಭಾಂಡೇಸ್ವರ ವಾರ್ಡ್ನ ಸದಸ್ಯರು ಇಂದು ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.










"ಕಳೆದ ಹಲವಾರು ವರ್ಷಗಳಿಂದ ಕಲ್ಸಂಕದಿಂದ ಕಲ್ಮಾಡಿಯವರೆಗೆ ನಿವಾಸಿಗಳು ಕೊಳಚೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಆ ಸಮಸ್ಯೆಗೆ ಪರಿಹಾರಕ್ಕಾಗಿ ಕೊಳಚೆ ನೀರಿನ ಶುದ್ದೀಕರಿಸಲು ಮತ್ತು ಪೈಪ್ ಲೈನ್ ಅಳವಡಿಸುವ ಮೂಲಕ ಬಿಡುವ ಕೆಲಸಕ್ಕೆ ಈಗಾಗಲೆ ರೂ 30 ಲಕ್ಷದ ಟೆಂಡರ್ ಕರೆದು ಒಂದು ತಿಂಗಳ ಕಳೆದು ಹೋಗಿದೆ. ಅಡ್ಕದಕಟ್ಟೆ, ನಿಟ್ಟೂರು ಭಾಗದಲ್ಲಿ ಅಗೆದು ಕಳೆದ ಒಂದು ತಿಂಗಳಿಂದ ಆ ಭಾಗದ ಜನ ಪ್ರಯಾಸಪಡುತ್ತಿದ್ದಾರೆ. ತಕ್ಷಣ ಸಂಬಂದ ಪಟ್ಟ ಕಾಂಟ್ರಾಕ್ಟರ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ, ಇಲ್ಲದಿದ್ದರೆ ಅವರ ಮೇಲೆ ನಗರಸಭೆ ಕ್ರಮ ತೆಗೆದುಕೊಳ್ಳಲಿ" ಎಂದು ಆಯಾ ಬಾಗದ ವಾರ್ಡ್ ಸದಸ್ಯರಾದ ಸಂತೋಷ್ ಕುಮಾರ್, ಸುಂದರ್ ಕಲ್ಮಾಡಿ, ವಿಜಯ ಕೊಡವೂರು, ಸವಿತಾ ಹರೀಶ್ ರಾಂ ಅವರು ನಗರಸಭೆಯ ಇಂಜಿನಿಯರ್ ಮೋಹನ್ ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು.
"ಇಂತಹ ಕಾಂಟ್ರಾಕ್ಟರ್ನಿಂದ ನಗರಸಭೆಗೆ, ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬಂದಿದೆ. ತಕ್ಷಣ ಕೆಲಸವನ್ನು ಆರಂಭ ಮಾಡಬೇಕು" ಎಂದು ಆಗ್ರಹಿಸಿದರು.
ಶಾಸಕ ರಘುಪತಿ ಭಟ್ ಮಾತನಾಡಿ, "ಇನ್ನು ಹದಿನೈದು ದಿನದೊಳಗೆ ಕೆಲಸ ಆಗುವಂತೆ ಸೂಚಿಸಿದರು. ಯುಜಿಡಿಯ ಕೆಲಸ ಮಾಡಲು ಅನುಭವ ಇರುವ ಕಾಂಟ್ರಾಕ್ಟರನ್ನು ಆಯ್ಕೆ ಮಾಡಬೇಕು. ಈ 30 ಲಕ್ಷದ ಕಾಮಗಾರಿ ಆಗದಿದ್ದರೆ ಮುಂದೆ ಆಗುವ 1 ಕೋಟಿ ಯುಜಿಡಿ ಕಾಮಗಾರಿಗಳಿಗೆ ತೊಂದರೆಯಾಗುತ್ತದೆ. ತಕ್ಷಣ ಕಾಂಟ್ರಾಕ್ಟರ್ ಅನ್ನು ಕರೆದು ಎಚ್ಚರಿಕೆ ನೀಡಿ" ಎಂದು ತಿಳಿಸಿದರು .
"ಇನ್ನು ದಿನೇ ದಿನೇ ಮಲ್ಪೆ ಬೀಚ್ ಮತ್ತು ಸೀ ವಾಕ್ ನೋಡಲು ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೇಯೆ ಅಲ್ಲಿನ ಪಾರ್ಕಿಂಗ್ ಮಾಡುವವರಿಂದ ದುಪ್ಪಟ್ಟು ಹಣ ಪಡೆದು ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅಲ್ಲದೆ ಎರಡೆರಡು ಕಡೆ ಹಣ ವಸೂಲಿ ಮಾಡುತ್ತಿದ್ದಾರೆ. ಸ್ಥಳೀಯರಿಗೂ ಅವರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳನ್ನು ಕೂಡ ಕ್ಯಾರೇ ಅನ್ನುತ್ತಿಲ್ಲ" ಎಂದು ವಡಂಭಾಂಡೆಶ್ವರ ವಾರ್ಡ್ ಕೌನ್ಸಿಲರ್ ಯೋಗೀಶ್ ಸಾಲ್ಯಾನ್ ಆರೋಪ ಮಾಡಿದರು.
"ಬೀಡಿನಗುಡ್ಡೆಯಲ್ಲಿ ವಲಸೆ ಕಾರ್ಮಿಕರು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಶೆಡ್ ನಿರ್ಮಿಸಿದ್ದಾರೆ. ಆದರೆ ಖಾಸಗಿಯವರು ಅವರಿಂದ ತೆರಿಗೆ ಸಂಗ್ರಹ ಮಾಡುತ್ತಿದ್ದಾರೆ" ಎಂದು ಒಳಕಾಡು ವಾರ್ಡ್ನ ಕೌನ್ಸಿಲರ್ ಕಮಿಷನರ್ ಗಮನ ಸೆಳೆದರು.