ಉಡುಪಿ, ಜ.31 (DaijiworldNews/PY): ಜ.30ರ ಶನಿವಾರದಂದು ಡಾ.ವಿ.ಎಸ್. ಆಚಾರ್ಯ ಸಭಾಭವನ ಜಿಲ್ಲಾ ಪಂಚಾಯತ್ ಉಡುಪಿಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಪ್ರತಿಭಾನ್ವಿತ ಬಾಲಕಿಯರಿಗೆ ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು.







ಆರಂಭದಲ್ಲಿ ಡಾ. ನವೀನಭಟ್ ಆರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಉಡುಪಿ ಅವರು ಮಕ್ಕಳೊಂದಿಗೆ ಪರಿಚಯ ಮಾಡಿಕೊಂಡು ಅವರು ಉತ್ತಮ ಓದುಗಾರಿಗೆ, ನಿರ್ಧಿಷ್ಟ ಗುರಿ ಇದ್ದು ನಿರಂತರ ಅಧ್ಯಯನ ಕ್ರಮವನ್ನು ರೂಢಿಕೊಂಡರೆ ನೀವು ಬಯಸಿದ ಗುರಿಯನ್ನು ತಲುಪಬಹುದಾಗಿದೆ ಎಂದರು.
ತದನಂತರ ಕೆ.ಆರ್. ಪಡೇಕರ ಅವರು, ಜಿಲ್ಲಾ ಪಂಚಾಯತ್ನಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯ ಚಟುವಟಿಕೆಗಳ ಬಗೆಗೆ ತಿಳಿಸಿದರು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರು. ನಂತರ ಮುಖ್ಯ ಲೆಕ್ಕಾಧಿಕಾರಿಗಳು ಹಣಕಾಸಿನ ವ್ಯವಸ್ಥೆಯ ಬಗೆಗೆ ತಿಳಿಸಿದರು. ತೆರಿಗೆ ಸಂಗ್ರಹ, ಬಳಕೆ ಹಾಗೂ ಯೋಜನೆ ಮಾಡುವ ಕುರಿತು ತಿಳಿಸಿದರು. ಯೋಜನಾ ನಿರ್ದೇಶಕರು ಮಾತನಾಡಿ ಜಿಲ್ಲಾ ಪಂಚಾಯತಿಯಲ್ಲಿ ಬರುವ ವಸತಿ ವ್ಯವಸ್ಥೆಯ ಬಗ್ಗೆ ಮಾತನಾಡಿದರು.
ನಂತರ ಶಿಕ್ಷಣ ಇಲಾಖೆಗೆಯ ಉಪನಿರ್ದೇಶಕರ ಕಚೇರಿಗೆ ಎಲ್ಲ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಿ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್. ಎಚ್. ನಾಗೂರ ಅವರು ಸಮಗ್ರ ಮಾಹಿತಿಯನ್ನು ಶಿಕ್ಷಣ ಸಚಿವರಿಂದ ಹಿಡಿದು ಶಾಲಾ ಶಿಕ್ಷಕರವರೆಗೆ ಇರುವ ಸಂಶಸ್ಥಿಕ ರಚನೆಯ ಬಗೆಗೆ ತಿಳಿಸಿದರು. ಅಕ್ಷರ ದಾಸೋಹ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ವಿಭಾಗದಿಂದ ಜಾಹ್ನವಿ, ಪ್ರಭಾಕರ ಅವರು ಮಕ್ಕಳಿಗೆ ತಿಳಿಸಿದರು. ಶಿಕ್ಷಣ ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳ ಪರಿಚಯ ಮಕ್ಕಳಿಗೆ ಮಾಡಿಕೊಡಲಾಯಿತು.
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಆರ್. ಶೇಷಪ್ಪ ಅವರು ಮಕ್ಕಳ ಮತ್ತು ಮಹಿಳೆಯರ ರಕ್ಷಣೆ, ಅವರ ಅಭಿವೃದ್ದಿಗೆ ಇರುವ ವಿವಿಧ ಕಾರ್ಯಕ್ರಮಗಳನ್ನು ವಿಧ್ಯಾರ್ಥಿನಿಯ ತಿಳಿಸಿಕೊಟ್ಟರು. ಬಾಲ್ಯವಿವಾಹ, ಮಕ್ಕಳ ಮೇಲೆ, ಮಹಿಳೆಯರ ಮೇಲೆ ಆಗುವ ಅತ್ಯಾಚಾರಗಳ ನಿಯಂತ್ರಣವನ್ನು ಹೇಗೆ ಕೈಗೊಳ್ಳುತ್ತೀರಿ ಎಂಬ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.
ನಂತರ ಕಾರ್ಮಿಕ ಇಲಾಖೆಯವರು, ಸಮಾಜ ಕಲ್ಯಾಣ ಇಲಾಖೆಯವರು, ಪ್ರವಾಸೋದ್ಯಮ ಇಲಾಖೆಯವರು ಆಗಮಿಸಿ ತಮ್ಮ ಇಲಾಖೆಯ ಕಾರ್ಯಕ್ರಮಗಳ ಕುರಿತು ಹಾಗೂ ಮಕ್ಕಳಿಗೆ ಇರುವ ಸೌಲಭ್ಯಗಳ ಕುರಿತು ವಿವರಣೆ ನೀಡಿದರು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಕೊನೆಯಲ್ಲಿ ಡಾ. ನವೀನ್ ಭಟ್ ಆರ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ಸಂವಾದದಲ್ಲಿ ಮಕ್ಕಳು ಸ್ವಚ್ಛತೆಯ ಬಗೆಗೆ, ಚರಂಡಿ ವ್ಯವಸ್ಥೆಯ ಬಗೆಗೆ, ಗ್ರಾಮೀಣ ರಸ್ತೆ ನಿರ್ಮಾಣ, ಕುಡಿಯು ನೀರು ಸೌಲಭ್ಯಗಳ ಬಗೆಗೆ ಪ್ರಶ್ನಿಸಿದರು. ಆಯ್.ಎ.ಎಸ್. ಪರೀಕ್ಷೆ ಪಾಸಾಗಲು ನಾವು ಹೇಗೆ ಓದಬೇಕು ? ಎಂದು ಕೇಳಿದರು. ಯು ಪಿ ಎಸ್ ಸಿ ಪರೀಕ್ಷೆಗೆ ಹೇಗೆ ಸಿದ್ದರಾಗಬೇಕೆಂಬುದನ್ನು ಕೇಳಿದರು. ಈ ಎಲ್ಲ ಹಲವು ಪ್ರಶ್ನೆಗಳು ಸಿ.ಇ.ಓ ಅವರು ನಿರರ್ಗಳವಾಗಿ ಉತ್ತರವನ್ನು ನೀಡಿ ವಿದ್ಯಾರ್ಥಿಗಳಿಗೆ ಅತ್ಯಮೂಲ್ಯವಾದ ಮಾಹಿತಿಯನ್ನು ನೀಡಿ ಅವರೆಲ್ಲರಿಗೂ ಸ್ಫೂರ್ತಿಯನ್ನುಂಟು ಮಾಡಿದರು.
ಅಂತಿಮವಾಗಿ ಸಿ.ಇ.ಓ ಅವರು ಇಡೀ ದಿನದ ಕಾರ್ಯಾಗಾರದಲ್ಲಿ ಉತ್ತಮ ಪಾಲ್ಗೊಳ್ಳುವಿಕೆ ಹಾಗೂ ಸಾಮಾಜಿಕ ಕಳಕಳಿಯುಳ್ಳ ಹಲವು ಪ್ರಶ್ನೆಗಳನ್ನು ಕೇಳಿದ ಬ್ರಹ್ಮಾವರ ಸ. ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ವರ್ಷಾಗೆ ಅರ್ಧ ಗಂಟೆಯ ಅವಧಿಗೆ ಉಡುಪಿಯ ಸಿಇಓ ಹುದ್ದೆಯನ್ನು ಅಲಕಂರಿಸಲು ಬಿಟ್ಟುಕೊಟ್ಟು ಅವಳನ್ನು ಸಿಇಓ ಅವರ ಕುರ್ಚಿಯ ಮೇಲೆ ಕೂರಿಸಿ, ನೀವು ಈಗ ಯಾವ ಸಾಮಾಜಿಕ ಸುಧಾರಣೆ ಕಾರ್ಯ ಮಾಡಲು ಹೇಳುವಿರಿ ಎಂದು ಕೇಳಿದರು. ಆಗ ಅವಳು ಪ್ಲಾಸ್ಟಿಕ್ ವಿಲೇವಾರಿ, ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಹಾಗೂ ನಿರುದ್ಯೋಗ ನಿವಾರಣೆ ಕುರಿತು ಚರ್ಚಿಸಿದಳು. ವರ್ಷಾಳ ಎಲ್ಲ ಪ್ರಶ್ನೆಗಳಿಗೆ ಸಿಇಓ ಡಾ.ನವೀನ್ ಭಟ್ ಅವರು ಉತ್ತರಗಳನ್ನು ನೀಡಿ ಸಂತುಷ್ಟಗೊಳಿಸಿದರು. ವರ್ಷಾ ಎಸ್. ಎಸ್. ಎಲ್. ಸಿ. ತರಗತಿ ಓದುತ್ತಿದ್ದಳು. ಅವಳಿಗೆ ನೀನು ಮುಂದಿನ 10 ವರ್ಷಗಳ ಅವಧಿಯಲ್ಲಿ ಐ.ಎ.ಎಸ್. ಪಾಸಾಗಿ ಇಂತಹದೇ ಹುದ್ದೆಯಲ್ಲಿ ನೀನು ಇರಬೇಕು ಎಂದು ಹೃದಯಪೂರಕವಾಗಿ ವರ್ಷಾಳಿಗೆ ಹಾರೈಸಿದರು. ಉಪನಿರ್ದೇಶಕರು ವಂದನಾರ್ಪಣೆ ಮಾಡುವುದರ ಮೂಲಕ ಕಾರ್ಯಾಗಾರಕ್ಕೆ ತೆರೆ ಎಳೆದರು.