ಮಂಗಳೂರು, ಜ.31 (DaijiworldNews/PY): ಮಂಗಳೂರು ಸಿಸಿಬಿ ಪೊಲೀಸರು ಪಾರ್ಟಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿ ಸಿಸಿಬಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.

ಬೆಟ್ಟಿಂಗ್ ಪ್ರಕರಣದ ಆರೋಪಿಗಳೊಂದಿಗೆ ಎಂಟು ಮಂದಿ ಪೊಲೀಸರು ಮದ್ಯ ಸೇವನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಎಂಟು ಸಿಸಿಬಿ ಪೊಲೀಸರ ವಿರುದ್ದ ಶಿಸ್ತು ಕ್ರಮಕೈಗೊಂಡಿದ್ದಾರೆ. ಜ.31ರ ಶನಿವಾರದಂದು ಘಟನೆಯಲ್ಲಿ ಭಾಗಿಯಾಗಿದ್ದ ಮೂವರು ಐಎಎಸ್ ಹಾಗೂ ಐವರು ಕಾನ್ಸ್ಟೇಬಲ್ಗಳನ್ನು ನಗರ ಪೊಲೀಸ್ ಕಮೀಷನರೇಟ್ನ ಬೇರೆ ಬೇರೆ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
"ಎಂಟು ಸಿಸಿಬಿ ಪೊಲೀಸರು ಬೆಟ್ಟಿಂಗ್ ಪ್ರಕರಣದ ಆರೋಪಿಗಳ ಜೊತೆ ಊಟ ಮಾಡುತ್ತಿರುವುದು, ಆತನಿಗೆ ಮದ್ಯ ಸೇವನೆಗೆ ಅವಕಾಶ ಕೊಟ್ಟಿರುವುದು ಗಮನಕ್ಕೆ ಬಂದಿದೆ. ಇದು ತಪ್ಪು. ಹಾಗಾಗಿ ಪೊಲೀಸರ ವಿರುದ್ದ ಇಲಾಖೆ ಶಿಸ್ತು ಕ್ರಮಕೈಗೊಂಡಿದೆ" ಎಂದು ಆಯುಕ್ತರು ತಿಳಿಸಿದ್ದಾರೆ.
"ಘಟನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಇಲಾಖೆ ವಿಚರಣೆಯನ್ನು ಕೈಗೊಂಡು ಕೂಲಂಕುಷ ವಿಚಾರಣಾ ವರದಿಯನ್ನು ಸಲ್ಲಿಸಲು ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ" ಎಂದು ಹೇಳಿದ್ದಾರೆ.
ಆದೇಶದಂತೆ ಮೂವರು ಐಎಎಸ್ ಹಾಗೂ ಐವರು ಹೆಡ್ ಕಾನ್ಸ್ಟೇಬಲ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೊಣಾಜೆ, ಬಜ್ಪೆ, ಉತ್ತರ, ಕಂಕನಾಡಿ, ಮಂಗಳೂರು ದಕ್ಷಿಣ, ಉರ್ವ ಹಾಗೂ ಬರ್ಕೆ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ.