ಮಂಗಳೂರು, ಜ.31 (DaijiworldNews/PY): ನಗರದ ಮಾಲ್ನಲ್ಲಿರುವ ಚಿಕ್ಕಿಂಗ್ ಇಟ್ಸ್ ಮೈ ಚಾಯ್ಸ್ ಎನ್ನುವ ಸಂಸ್ಥೆಯಿಂದ ಆಹಾರ ಪಾರ್ಸೆಲ್ ಪಡೆದ ಮಹಿಳೆಯೊಬ್ಬರು ಆಘಾತಕ್ಕೊಳಗಾಗಿದ್ದು, ಪಾರ್ಸೆಲ್ನಲ್ಲಿ ತರಿಸಿದ್ದ ಆಹಾರದಲ್ಲಿ ಜೀವಂತ ಹುಳು ಹರಿದಾಡಿದೆ ಎಂದು ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಗರದ ಲೇಡಿಹಿಲ್ ನಿವಾಸಿ ಸಲ್ಮಾ ಸಿಮ್ರಲ್ ಕೆ. ಎಂಬುವವರು ಜ.30ರ ಶನಿವಾರ ರಾತ್ರಿ 7.30 ರ ಸುಮಾರಿಗೆ ಚಿಕ್ಕಿಂಗ್ ಇಟ್ಸ್ ಮೈ ಚಾಯ್ಸ್ನಿಂದ ಚಿಕನ್ ಹಾಗೂ ಬರ್ಗರ್ ಆರ್ಡರ್ ಮಾಡಿದ್ದರು. ನಂತರ ರಾತ್ರಿ 8 ಗಂಟೆಯ ಸುಮಾರಿಗೆ ಪಾರ್ಸೆಲ್ ಬಂದಿದ್ದು, ಸಲ್ಮಾ, ಅವರ ತಾಯಿ ಹಾಗೂ ಮಕ್ಕಳು ಆಹಾರವನ್ನು ಸೇವಿಸಿದ್ದಾರೆ. ಈ ವೇಳೆ ಚಿಕನ್ ಖಾದ್ಯದಲ್ಲಿ ಜೀವಂತ ಹುಳು ಕಾಣಿಸಿಕೊಂಡಿದೆ. ಇದರಿಂದ ಆತಂಕಕ್ಕೀಡಾಗಿದ್ದು, ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಲ್ಮಾ, "ನಾವು ಚಿಕ್ಕಿಂಗ್ನಿಂದ ಚಿಕನ್ ಸಹಿತ ಬರ್ಗರ್ ಅನ್ನು ಆರ್ಡರ್ ಮಾಡಿದ್ದೆವು. ನಾನು ನನ್ನ ತಾಯಿ ಹಾಗೂ ಮಕ್ಕಳೊಂದಿಗೆ ಆಹಾರ ಸೇವಿಸುತ್ತಿದ್ದೆವು. ಆ ಸಂದರ್ಭ ಬರ್ಗರ್ನಲ್ಲಿ ಜೀವಂತ ಹುಳು ಹರಿದಾಡುತ್ತಿತ್ತು. ಇದರಿಂದ ನಮಗೆ ಆಘಾತವಾಯಿತು. ಶುದ್ದ ಆಹಾರ ಸಿಗುತ್ತದೆ ಎಂದು ನಾವು ಖರೀದಿ ಮಾಡಲು ಮುಂದಾದರೆ ಸಂಸ್ಥೆಯು ಕಳಪೆ ಗುಣಮಟ್ಟದ ಆಹಾರವನ್ನು ಸರಬರಾಜು ಮಾಡಿದೆ. ನಾವು ಸಂಸ್ಥೆಯವರನ್ನು ಸಂಪರ್ಕಿಸಲು ಯತ್ನಿಸಿದೆವು, ಆದರೆ, ಸಂಪರ್ಕ ಸಾಧಿಸಲು ಆಗಲಿಲ್ಲ. ಆಹಾರವನ್ನು ಪ್ಯಾಕ್ ಮಾಡುವ ಮೊದಲು ಅವರು ಪಾರ್ಸೆಲ್ ಪೆಟ್ಟಿಗೆಯನ್ನು ಪರಿಶೀಲಿಸಬೇಕಾಗಿತ್ತು. ಏನಾದರು ತೊಂದರೆಯಾದರೆ ಸಂಭವಿಸಿದರೆ ಯಾರು ಜವಾಬ್ದಾರಿ?" ಎಂದು ಪ್ರಶ್ನಿಸಿದ್ದಾರೆ.
"ನಾವು ಆರು ಬರ್ಗರ್ಗಳನ್ನು ಆರ್ಡರ್ ಮಾಡಿದ್ದೆವು. ಆ ಪೈಕಿ ತಾಯಿ ಹಾಗೂ ಮಕ್ಕಳು ನಾಲ್ಕು ಬರ್ಗರ್ ಅನ್ನು ಸೇವಿಸಿದ್ದರು. ಸಹೋದರಿ ಹಾಗೂ ನನಗೆಂದು ಎರಡು ಬರ್ಗರ್ ಉಳಿದಿತ್ತು. ನಾನು ತಿನ್ನಲು ಬರ್ಗರ್ ಪ್ಯಾಕೆಟ್ ಅನ್ನು ತೆರೆದಾಗ, ಜೀವಂತ ಹುಳು ಕಾಣಿಸಿತು. ಇದು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಈ ವಿಚಾರದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು" ಎಂದಿದ್ದಾರೆ.
ಈ ಸಮಸ್ಯೆಗೆ ಪ್ರತಿಕ್ರಿಯಿಸಿದ ಚಿಕ್ಕಿಂಗ್ ಇಟ್ಸ್ ಮೈ ಚಾಯ್ಸ್ನ ವ್ಯವಸ್ಥಾಪಕ ಕೇಶವ್ ದಾಸ್ ಅವರು, "ಚಿಕನ್ ಖಾದ್ಯಗಳನ್ನು 163 ಡಿಗ್ರಿ ಟೆಂಪರೇಚರ್ನಲ್ಲಿ ತಯಾರಿಸಲಾಗುತ್ತದೆ. ಈ ರೀತಿಯಾದ ಖಾದ್ಯದಲ್ಲಿ ಜೀವಂತ ಹುಳು ಕಂಡುಬರುವ ಸಾಧ್ಯತೆ ಇಲ್ಲ. ಸ್ವಚ್ಛಗೊಳಿಸಿದ ಬಳಿಕವೇ ಆಹಾರವನ್ನು ಪ್ಯಾಕ್ ಮಾಡಲಾಗುತ್ತದೆ. ಈವರೆಗೆ ಈ ರೀತಿಯಾದ ಆರೋಪಗಳು ಸಂಸ್ಥೆಯ ವಿರುದ್ದವಾಗಿ ಕೇಳಿಬಂದಿಲ್ಲ. ಪಾರ್ಸೆಲ್ ಮಾಡಿದ ಆಹಾರಕ್ಕೆ ಪ್ರತಿಯಾಗಿ ಬೇರೆ ಆಹಾರ ನೀಡುತ್ತೇವೆ. ಅಲ್ಲದೇ, ಹಣವನ್ನು ಕೂಡಾ ಸಂಸ್ಥೆ ಮರುಪಾವತಿ ಮಾಡಲಿದೆ. ಈ ಬಗ್ಗೆ ನಾವು ರವಿವಾರ ಮಹಿಳೆಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುತ್ತೇವೆ" ಎಂದು ತಿಳಿಸಿದ್ದಾರೆ.