ಕಾರ್ಕಳ, ಜು 09: ಇಲ್ಲಿನ ಕುಕ್ಕುಂದೂರುರಿನ ಅಯ್ಯಪ್ಪ ನಗರದದ ಕೆರ್ತಾಡಿಯ ಮನೆಯೊಂದರಲ್ಲಿ ಮಹಿಳೆಯನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ.ಕೊಲೆಯಾದ ಮಹಿಳೆಯನ್ನು ಪ್ಲೋರಿನಾ ಮಚಾದೋ ಅಲಿಯಾಸ್ ಪ್ಲೋರಿನ್ ಡಿ. ಸೋಜಾ (54) ಎಂದು ಗುರುತಿಸಲಾಗಿದೆ . ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಕೊಲೆ ಕೃತ್ಯ ಬಹಿರಂಗವಾಗಿದೆ. ಮೃತದೇಹವು ಬೆಡ್ಶೀಟ್ ಮುಚ್ಚಿದ ಸ್ಥಿತಿಯಲ್ಲಿತ್ತು. ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕತ್ತಿಯಿಂದ ಕಡಿದು ಕೊಲೆಗೈದಿರಬಹುದು ಎಂದು ಶಂಕಿಸಲಾಗಿದೆ.
ಮಾಳ ಸಮೀಪದ ಹುಕ್ರಟ್ಟೆಯ ನಿವಾಸಿಯಾದ ಅಂತೋನಿ ಡಿಸೋಜಾ ವಿವಾಹವಾಗಿದ್ದ ಅವರು ದಂಪತಿ ಮಧ್ಯೆ ವಿರಸ ಉಂಟಾಗಿ ಕಳೆದ ಮೂರು ವರ್ಷಗಳಿಂದ ಇಬ್ಬರೂ ಪ್ರತ್ಯೇಕ ವಾಸಿಸುತ್ತಿದ್ದರು. ವಿವಾದ ಪ್ರಕರಣ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು, ಕೋರ್ಟ್ ಮೆಟ್ಟಿಲೇರಿಲ್ಲ. ದಂಪತಿಗೆ 16 ವರ್ಷದ ಹಾಗೂ 19 ವರ್ಷದ ಇಬ್ಬರು ಮಕ್ಕಳಿದ್ದಾರೆ. ಕಿರಿಯ ಮಗ ತಂದೆಯ ಜತೆಗೆ ಹಾಗೂ ಹಿರಿಯ ಮಗ ತಾಯಿಯ ಬಳಿ ಇದ್ದರು. ಶನಿವಾರ ರಜೆಯ ಹಿನ್ನೆಲೆಯಲ್ಲಿ ಹಿರಿಯ ಮಗನೂ ತಂದೆಯ ಮನೆಗೆ ತೆರಳಿದ್ದ. ಘಟನೆ ನಡೆದ ರಾತ್ರಿ ಮನೆಯಲ್ಲಿ ಫ್ಲೋರಿನ್ ಒಬ್ಬರೇ ಇದ್ದರು.
ಪ್ರತಿ ಭಾನುವಾರ ಫ್ಲೋರಿನ್ ಪ್ರಾರ್ಥನೆಗಾಗಿ ಚರ್ಚ್ ಹೋಗುತ್ತಿದ್ದು, ಘಟನೆ ನಡೆದ ದಿನ ಚರ್ಚ್ ಗೆ ತೆರಳಿರಲಿಲ್ಲ. ಹೀಗಾಗಿ ಮಧ್ಯಾಹ್ನದ ವೇಳೆಗೆ ಇವರ ಸಂಬಂಧಿ ಮಹಿಳೆಯೊಬ್ಬರು ಮನೆಗೆ ಬಂದಿದ್ದು, ಆಗ ಕೊಲೆ ಘಟನೆ ಬೆಳಕಿಗೆ ಬಂದಿದೆ. ಇನ್ನು ಮನೆಯೊಳಗೆ ಕಾದಾಟ ನಡೆದ ಕುರುಹು ಲಭಿಸಿದ್ದು, ಪ್ಲೋರಿನಾ ಅವರ ಕುತ್ತಿಗೆಗೆ ಕತ್ತಿಯಿಂದ ಇರಿಯಲಾಗಿದ್ದು, ಕಿವಿ ತುಂಡಾಗಿದೆ. ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ಪತಿ ಅಂತೋನಿ ಡಿ ಸೋಜಾ ಮಕ್ಕಳು ಘಟನಾ ಸ್ಥಳಕ್ಕೆ ಆಗಮಿಸಿದರು.
ಫ್ಲೋರಿನ್ ಅವರು ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದು, 8 ವರ್ಷದ ಹಿಂದೆ ಊರಿಗೆ ಆಗಮಿಸಿದ್ದರು . ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಅವರ ವ್ಯವಹಾರದಲ್ಲಿ ಇತ್ತೀಚೆಗೆ ನಷ್ಟ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ.
ಹಾಗೂ ಪಾಲುದಾರಿಕೆಯಲ್ಲಿ ಜಿಮ್ ತರಭೇತಿ ಕೇಂದ್ರವನ್ನು ಆರಂಭಿಸಿದ್ದರು. ಈ ವ್ಯವಹಾರದಲ್ಲಿ ಪಾಲುದಾರರ ಮಧ್ಯೆ ಭಿನ್ನಾಭಿಪ್ರಾಯವಿತ್ತು ಎಂಬ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸ್ದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಡಿವೈಎಸ್ಪಿ ಕುಮಾರಸ್ವಾಮಿ, ಕಾರ್ಕಳ ನಗರ ಠಾಣಾ ಪಿಎಸ್ಐ ನಂಜ ನಾಯ್ಕ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.