ಮಂಗಳೂರು, ಜು 09: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಬಳಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಓರ್ವನನ್ನು ಬಂಧಿಸಿ, ಮೂವರು ಸಂತ್ರಸ್ತ ಯುವತಿಯರನ್ನು ಪೊಲೀಸರು ರವಿವಾರ ರಕ್ಷಿಸಿದ್ದಾರೆ.
ಅದ್ಯಪಾಡಿ ಕೋಡಿ ಹೌಸ್ ನಿವಾಸಿ ಯಾದವ ಮೂಲ್ಯ (36) ಬಂಧಿತ ಆರೋಪಿ. ಈತನು ಮಸಾಜ್ ಸೆಂಟರ್ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಅಲ್ಲದೆ ಸಂಸ್ಥೆಯ ಮಾಲಕ ನಾಗೇಶ್, ಲಕ್ಷ್ಮೀನಾರಾಯಣ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯಿಂದ 4 ಮೊಬೈಲ್ ಹಾಗೂ 4 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಕೇಂದ್ರ ವಿಭಾಗದ ಎಸಿಪಿ ಉದಯ ನಾಯಕ್ ಮಾರ್ಗದರ್ಶನದಲ್ಲಿ ಉರ್ವ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.