ಕಾಸರಗೋಡು,ಜ.31 (DaijiworldNews/HR): ಪಾರದರ್ಶಕ ಆಡಳಿತ ಎಂಬ ಘೋಷಣೆಯೊಂದಿಗೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ನೇತೃತ್ವದ ಐಶ್ವರ್ಯ ಕೇರಳ ಯಾತ್ರೆ ಇಂದು ಸಂಜೆ ಕುಂಬಳೆಯಿಂದ ಪ್ರಯಾಣ ಬೆಳೆಸಿತು.

ರಾಜ್ಯದ ಎಲ್ಲಾ 140 ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಲಿರುವ ಯಾತ್ರೆ ಫೆ.22 ರಂದು ತಿರುವನಂತಪುರದಲ್ಲಿ ಸಮಾಪನಗೊಳ್ಳಲಿದೆ.
ಏಪ್ರಿಲ್ನಲ್ಲಿ ನಡೆಯಲಿರುವ ವಿಧಾಸಭಾ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸುವ ನಿಟ್ಟಿನಲ್ಲಿ ಈ ಯಾತ್ರೆ ಕೈಗೊಳ್ಳಲಾಗಿದ್ದು, ಕುಂಬಳೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯಾತ್ರೆಗೆ ಚಾಲನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಯುಡಿಎಫ್ ಸಂಚಾಲಕ ಎಂ.ಎಂ ಹಸನ್, ಘಟಕ ಪಕ್ಷಗಳಾದ ಮುಸ್ಲಿಂ ಲೀಗ್ನ ಮುಖಂಡರಾದ ಸಂಸದ ಪಿ.ಕೆ ಕುಂಞಲಿ ಕುಟ್ಟಿ, ಕರ್ನಾಟಕ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ರಮಾನಾಥ ರೈ, ಎಐಸಿಸಿ ಕಾರ್ಯದರ್ಶಿ ಐವನ್ ಡಿ'ಸೋಜ, ಕಾಂಗ್ರೆಸ್ನ ಕೇರಳ ಉಸ್ತುವಾರಿ ತಾರಿಕ್ ಅನ್ವರ್ ಮೊದಲಾದವರು ಉಪಸ್ಥಿತರಿದ್ದರು.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಉದುಮ ಕ್ಷೇತ್ರದ ಪೆರಿಯ, 12 ಗಂಟೆಗೆ ತ್ರಿಕ್ಕರಿಪುರ ಮೊದಲಾದೆಡೆ ಸ್ವಾಗತ ನೀಡಲಾಗುವುದು. ಬಳಿಕ ಕಣ್ಣೂರು ಜಿಲ್ಲೆಗೆ ಪ್ರವೇಶಿಸಲಿದೆ.
ಫೆ. 22ರಂದು ತಿರುವನಂತಪುರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ.