ಮಂಗಳೂರು, ಫೆ.01 (DaijiworldNews/HR): ಜನವರಿ 30 ರಂದು ಬೆಂದೂರ್ ವೆಲ್ನಲ್ಲಿರುವ ರೆಸ್ಟೋರೆಂಟ್ನಲ್ಲಿ ಯುವತಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿದ್ದಾಗ ಯುವತಿಯ ಮೇಲೆ ಆಕೆಯ ಹಳೆಯ ಸ್ನೇಹಿತ ಮತ್ತು ಆತನ ಗೆಳೆಯರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.




ಬಂಧಿತ ಆರೋಪಿಗಳನ್ನು ತ್ರಿಶೂಲ್ ಸಾಲ್ಯಾನ್ (19), ಸಂತೋಷ್ ಪೂಜಾರಿ (19), ಅಶೋಕ್ನಗರದ ಡ್ಯಾನಿಷ್ ಅರೆನ್ ಡಿಕ್ರೂಸ್ (18) ಎಂದು ಗುರುತಿಸಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, "ಶನಿವಾರ ಬೆಂದೂರ್ ವೆಲ್ನ ರೆಸ್ಟೋರೆಂಟ್ನಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾಗ ಆರೋಪಿಯು ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದು, ಈ ಕೃತ್ಯವನ್ನು ತಡೆಯಲು ಬಂದ ಯುವತಿಯ ಸ್ನೇಹಿತರಿಗೆ ಗಂಬೀರವಾಗಿ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ ವಿವಿಧ ನಿಬಂಧನೆಗಳ ಅಡಿಯಲ್ಲಿ ನಗರ (ಪೂರ್ವ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದರು.
ಇನ್ನು "18 ವರ್ಷದ ಯುವತಿ ಪಿಯುಸಿ ಓದುತ್ತಿದ್ದು, ಆಕೆಯ ಪೋಷಕರು ಕೆನಡಾದಲ್ಲಿರುವುದರಿಂದ ಅಜ್ಜಿಯರೊಂದಿಗೆ ವಾಸಿಸುತ್ತಿರುತ್ತಾಳೆ. ತ್ರಿಶೂಲ್ ಸಾಲ್ಯಾನ್ ಮತ್ತು ಯುವತಿ ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಪರಿಚಯವಾಗಿದ್ದರು. ನಂತರ ವೈಮಸ್ಸು ಉಂಟಾಗಿ ಯುವತಿ ಆತನಿಂದ ದೂರವಾಗಲು ನಿರ್ಧರಿಸಿದ್ದಳು. ಹೀಗಾಗಿ ಆತ ನೀಡಿದ್ದ ಗಿಫ್ಟ್ ಗಳನ್ನು ಮರಳಿಸಲು ಕೆಲ ದಿನಗಳ ಹಿಂದೆ ನಗರದ ಬಂಟ್ಸ್ ಹಾಸ್ಟೆಲ್ ಬಳಿ ಬರುವಂತೆ ಹೇಳಿದ್ದಳು. ಈ ವೇಳೆಯೂ ತ್ರಿಶೂಲ್ ಆಕೆಯ ಮೇಲೆ ದಾಳಿಗೆ ಯತ್ನಿಸಿದ್ದ" ಎಂದು ತಿಳಿಸಿದ್ದಾರೆ.
ತ್ರಿಶೂಲ್ ರೌಡಿ ಶೀಟರ್ ಆಗಿದ್ದು, ಬಂದರು ಮತ್ತು ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ ಎನ್ನಲಾಗಿದೆ.