ಮಂಗಳೂರು, ಫೆ.01 (DaijiworldNews/MB) : ''ದೇವಾಲಯದಲ್ಲಿ ಕಳ್ಳತನ ಮತ್ತು ಕೇಸರಿ ಧ್ವಜವನ್ನು ಕಲುಷಿತಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ'' ಎಂದು ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಫೆಬ್ರವರಿ 1 ಸೋಮವಾರ ತಿಳಿಸಿದರು.


ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ''ತಲಪಾಡಿ ನಿವಾಸಿಗಳಾದ ಮಹಮ್ಮದ್ ಸುಹೈಲ್ (19) ಮತ್ತು ನಿಜಾಮುದ್ದೀನ್ (21) ಬಂಧಿತ ಆರೋಪಿಗಳು. ಆರು ಜನರ ತಂಡ ಈ ಕೃತ್ಯವನ್ನು ಎಸಗಿದ್ದು ಇನ್ನೂ ನಾಲ್ವರನ್ನು ಬಂಧನವಾಗಬೇಕಿದೆ'' ಎಂದು ಮಾಹಿತಿ ನೀಡಿದರು.
''ವಿಚಾರಣೆಯ ಬಳಿಕ ಆರೋಪಿಗಳು, 2020 ನೇ ನವೆಂಬರ್ನಲ್ಲಿ ಕೊಣಾಜೆ ಮುಲಾರದ ಅರಸು ಮುಂಡಿತ್ತಾಯ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗೆಯೇ ಜನವರಿ 15 ರಂದು ಮಾಡೂರಿನಲ್ಲಿ ರಸ್ತೆ ಬದಿಯಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ದೇರಳಕಟ್ಟೆಯ ಅಯ್ಯಪ್ಪ ಸ್ಥಾಮಿ ದೇವಸ್ಥಾನದ ಸೇವಾ ಕೌಂಟರ್ಗೆ ನುಗ್ಗಿ ಕಳವು ಮಾಡಿದ ಬಗ್ಗೆ, ಪೆರಂಡೆಯಲ್ಲಿರುವ ಗೋಪಾಲಕೃಷ್ಣ ಮಂದಿರಕ್ಕೆ ಹೋಗಿ ಕೇಸರಿ ಧ್ವಜ ಕಲುಷಿತಗೊಳಿಸಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಕುತ್ತಾರು ಆದಿಸ್ಥಳದ ಕೊರಗಜ್ಜ ದೈವಸ್ಥಾನಕ್ಕೆ ಹೋಗಿ ಕಳ್ಳತನಕ್ಕೆ ಯತ್ನಿಸಿದ ಬಗ್ಗೆಯೂ ತಪ್ಪೊಪ್ಪಿಕೊಂಡುದ್ದಾರೆ'' ಎಂದು ಆಯುಕ್ತರು ತಿಳಿಸಿದರು.
''ಆರೋಪಿಗಳ ವಿರುದ್ದ ಪುಂಜಲಕಟ್ಟೆ, ಬಂಟ್ವಾಳ, ಮಂಗಳೂರು ಗ್ರಾಮಾಂತರ, ಕಂಕನಾಡಿ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. 9 ಪ್ರಕರಣಗಳಲ್ಲಿ ಐದು ದೇವಾಲಯದ ಕಳ್ಳತನ ಪ್ರಕರಣವಾಗಿದ್ದು ಇತರ ಪ್ರಕರಣದಲ್ಲಿ ಪೆಟ್ರೋಲ್ ಪಂಪ್ ಕಳ್ಳತನ ಪ್ರಕರಣವೂ ಸೇರಿದೆ. ಅಪರಾಧ ಮಾಡಲು ಬಳಸಿದ ಸ್ಕೂಟರ್, ದೇವಾಲಯಗಳ ಹುಂಡಿ ಪೆಟ್ಟಿಗೆಗಳು, ಚಾಕು ಮತ್ತು ಸ್ಪ್ಯಾನರ್ ಅನ್ನು ನಾವು ವಶಪಡಿಸಿಕೊಂಡಿದ್ದೇವೆ. ವಶಪಡಿಸಿಕೊಂಡ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ 35,000 ರೂ. ಆಗಿದೆ'' ಎಂದು ಹೇಳಿದರು.
''ದೇವಾಲಯದ ಕಳ್ಳತನ ಪ್ರಕರಣದಲ್ಲಿ, ಹುಂಡಿಯಲ್ಲಿ ಹೆಚ್ಚು ಮೌಲ್ಯಯುತವಾದದ್ದು ಇರಲಿಲ್ಲ ಆದ್ದರಿಂದ ಗಮನ ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಅವರು ಕೇಸರಿ ಧ್ವಜ ಕಲುಷಿತಗೊಳಿಸಿದರು'' ಎಂದು ಆಯುಕ್ತರು ತಿಳಿಸಿದರು.
''ಹುಂಡಿಯಲ್ಲಿ ಆಕ್ಷೇಪಾರ್ಹ ವಸ್ತುಗಳು ಹಾಕಿದ ಪ್ರಕರಣಕ್ಕೂ ಈ ಗ್ಯಾಂಗ್ಗೂ ಯಾವುದೇ ಸಂಬಂಧವಿಲ್ಲ. ಆ ಪ್ರಕರಣವು ಮುನ್ನಡೆ ಪಡೆದಿದ್ದು ಶೀಘ್ರದಲ್ಲೇ ಆ ಪ್ರಕರಣ ಭೇದಿಸಲಾಗುವುದು'' ಎಂದು ತಿಳಿಸಿದರು.