ಬಂಟ್ವಾಳ, ಫೆ.02 (DaijiworldNews/MB) : ಫೆಬ್ರವರಿ 2 ರ ಮಂಗಳವಾರ ಬೆಳಿಗ್ಗೆ ತಾಲೂಕಿನ ಸೂರಿಕುಮೇರ್ ಮಸೀದಿಯ ಮುಂದೆ ಬೆಂಗಳೂರಿಗೆ ಅನಿಲ ಸಾಗಿಸುತ್ತಿದ್ದ ಎಲ್ಪಿಜಿ ಟ್ಯಾಂಕರ್ ಪಲ್ಟಿಯಾಗಿದ್ದು ಅದೃಷ್ಟವಶಾತ್ ಈವರೆಗೆ ಟ್ಯಾಂಕರ್ನಲ್ಲಿ ಎಲ್ಪಿಜಿ ಅನಿಲ ಸೋರಿಕೆಯಾಗಿಲ್ಲ.




ಚಾಲಕ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಮಂಗಳೂರು ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ವಾಹನ ಸಂಚಾರವನ್ನು ನಿಯಂತ್ರಿಸಲು ಸ್ಥಳೀಯರು ಮುಂದಾಗಿದ್ದಾರೆ.
ಮಂಗಳೂರಿನಿಂದ ಬರುವ ವಾಹನಗಳನ್ನು ಕಲ್ಲಡ್ಕ, ವಿಟ್ಲ ರಸ್ತೆ ಮೂಲಕ ಹೋಗಬೇಕಿದ್ದು, ಉಪ್ಪಿನಂಗಡಿಯಿಂದ ಆಗಮಿಸುವವರನ್ನು ಮಾಣಿ, ಬುಡೋಳಿ, ಕಬಕ ರಸ್ತೆ ಮೂಲಕ ಸಾಗಬೇಕಿದೆ. ವಿಟ್ಲ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಕೆಲವು ಸ್ಥಳೀಯರನ್ನು ಹೊರತುಪಡಿಸಿ ಬುಡೋಳಿ ಯೂತ್ ಫೆಡರೇಶನ್ ಮತ್ತು ಸೂರಿಕುಮೇರ್ ಬದ್ರಿಯಾ ಯಂಗ್ ಮೆನ್ ಸದಸ್ಯರ ನಾಯಕತ್ವದಲ್ಲಿ ಸಂಚಾರದಟ್ಟಣೆಯನ್ನು ನಿಯಂತ್ರಿಸಲಾಗುತ್ತಿದೆ.
ಮಸೀದಿಯ ಧ್ವನಿವರ್ಧಕವನ್ನು ಜನರಿಗೆ ಮಾಹಿತಿ ಹಾಗೂ ಎಚ್ಚರಿಕೆ ನೀಡಲು ಬಳಸಲಾಗುತ್ತಿದೆ. ಅನಿಲದ ಟ್ಯಾಂಕರ್ ಪಲ್ಟಿಯಾಗುವ ಹಿನ್ನೆಲೆ, ಅನಿಲ ಸೋರಿಕೆಯಾಗದಿದ್ದರೂ ಕೂಡಾ ಬೆಂಕಿ ಬಳಸದಂತೆ ಎಚ್ಚರಿಕೆ ನೀಡಲಾಗಿದೆ.