ಮಂಗಳೂರು, ಜು 09: ಕಲ್ಲಿನ ಕೋರೆಯಲ್ಲಿ ಈಜಲು ಬಂದಿದ್ದ 13 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಅಡ್ಯಾರ್ ಪದವಿನಲ್ಲಿ ಜುಲೈ 08 ರ ಭಾನುವಾರ ನಡೆದಿದೆ. ಮೃತ ಬಾಲಕನನ್ನು ಸ್ಥಳೀಯ ನಿವಾಸಿ ತಮೀಮ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಮೃತ ಬಾಲಕ ತನ್ನ ಸ್ನೇಹಿತರೊಂದಿಗೆ ಈಜಲೆಂದು ಬಂದಿದ್ದು, ಈಜಾಡುತ್ತಾ ಕಲ್ಲಿನ ಕೋರೆಯ ಮಧ್ಯಭಾಗವನ್ನು ತಲುಪಿದಾಗ ಆತ ನಿಯಂತ್ರಣ ಕಳೆದುಕೊಂಡು ಮುಳುಗಲಾರಂಭಿಸಿದ್ದಾನೆ. ತಕ್ಷಣ ಈತನ ಸ್ನೇಹಿತರು ಸಹಾಯಕ್ಕೆ ಮುಂದಾದರೂ ದುರಾದೃಷ್ಟಾವಶತ್ ಆತ ನೀರಿನಲ್ಲಿ ಮುಳುಗಿದ್ದಾನೆ ಎಂದು ಹೇಳಲಾಗುತ್ತಿದೆ.
ತಮೀಮ್ ಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ನಿನ್ನೆ ಶೋಧ ಕಾರ್ಯಚರಣೆ ನಡೆಸಿತ್ತು. ಆದರೆ ಇಂದು ಜು 09 ರ ಸೋಮವಾರ ಸ್ಥಳೀಯರು ಬಾಲಕನ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆ ಬಳಿಕ ಸ್ಥಳೀಯರು ಪ್ರತಿಭಟನೆಗಾಗಿ ಮುಂದಾಗಿದ್ದು, ಕಾನೂನುಬಾಹಿರ ಕಲ್ಲು ಕ್ವಾರಿಯ ಮಾಲೀಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.